ಉತ್ತರ ರಾಜ್ಯಗಳಲ್ಲಿ ಕೃಷಿ ಯೋಜನೆಗಳ ಅನುಷ್ಠಾನ ಕೃಷಿ ಸಚಿವಾಲಯದಿಂದ ಮಧ್ಯಂತರ ಮರು ಪರಿಶೀಲನೆ
ಹೊಸದಿಲ್ಲಿ: ಉತ್ತರ ರಾಜ್ಯಗಳು ಅನುಷ್ಠಾನಗೊಳಿಸಿದ ಕೃಷಿ ಯೋಜನೆಗಳ ಮಧ್ಯಂತರ ಮರು ಪರಿಶೀಲನೆ ನಡೆಸಲು ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ ಹೊಸದಿಲ್ಲಿಯ ಕೃಷಿ ಭವನದಲ್ಲಿ ಶನಿವಾರ ಪ್ರಾದೇಶಿಕ ಸಮಾವೇಶ ಆಯೋಜಿಸಿತ್ತು.
ಪ್ರಗತಿ ಮೌಲ್ಯಮಾಪನ ಮಾಡಲು ಹಾಗೂ ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಸವಾಲುಗಳನ್ನು ಪರಿಹರಿಸಲು ಪಂಜಾಬ್, ಉತ್ತರಾಖಂಡ, ಹಿಮಾಚಲಪ್ರದೇಶ, ಹರ್ಯಾಣ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ, ಲಡಾಖ್, ದಿಲ್ಲಿಯ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು.
ಸಮಾವೇಶದಲ್ಲಿ ಕಾರ್ಯದರ್ಶಿ ಡಾ. ದೇವೇಶ್ ಚತುರ್ವೇದಿ ಸಕಾಲಿಕ ನಿಧಿ ಹಂಚಿಕೆ ಖಾತರಿ, ರಾಜ್ಯದ ಕೊಡುಗೆ ಹಾಗೂ ಸಿಂಗಲ್ ನೋಡಲ್ ಅಕೌಂಟ್ (ಎಸ್‌ಎನ್‌ಎ) ಬಾಕಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್‌ಎಸ್)ಗಳನ್ನು ತ್ವರಿತ ಕಾರ್ಯಗತಗೊಳಿಸುವಂತೆ ರಾಜ್ಯಗಳನ್ನು ಆಗ್ರಹಿಸಿದರು.
ಅವರು ಎಸ್‌ಎನ್‌ಎ-ಎಸ್‌ಪಿಎಆರ್‌ಎಸ್‌ಎಚ್ ಅನ್ನು ಕಾರ್ಯಗತಗೊಳಿಸುವುದು, ಬಳಕೆಯಾಗದ ಬಾಕಿಗಳು ಹಾಗೂ ಬಡ್ಡಿಯನ್ನು ಹಿಂದಿರುಗಿಸುವುದು ಹಾಗೂ ಬಳಕೆಯ ಪ್ರಮಾಣ ಪತ್ರ (ಯುಸಿ)ಗಳನ್ನು ಪ್ರಾಮಾಣಿಕವಾಗಿ ಸಲ್ಲಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‌ಕೆವಿವೈ) ಹಾಗೂ ಕೃಷೋನ್ನತಿ ಯೋಜನೆ, ಸೇರಿದಂತೆ ಪ್ರಮುಖ ಯೋಜನೆಗಳ ಅನುಷ್ಠಾನವನ್ನು ಸುಧಾರಿಸುವ ಹಾಗೂ ಕಾರ್ಯ ನಿರ್ವಹಿಸದ ರಾಜ್ಯಗಳು ಈ ವಿತ್ತ ವರ್ಷದ ಉಳಿದ ತಿಂಗಳಲ್ಲಿ ತಮ್ಮ ಪ್ರಯತ್ನವನ್ನು ಹೆಚ್ಚಿಸುವಂತೆ ಉತ್ತೇಜಿಸುವ ಗುರಿಯನ್ನು ಈ ಸಮಾವೇಶ ಹೊಂದಿತ್ತು.
ಹಿಂದಿನಂತ ನಿಧಿ ಬಳಕೆಯಲ್ಲಿ ಆಗುವ ವಿಳಂಬವನ್ನು ಕಡಿಮೆ ಮಾಡುವ ಉದ್ದೇಶದಿಂದ ಎಪ್ರಿಲ್ ಒಳಗೆ ಮೊದಲ ಕಂತನ್ನು ಸಕಾಲಿಕವಾಗಿ ಬಿಡುಗಡೆ ಮಾಡಲು ಸಾಧ್ಯವಾಗುವಂತೆ ಡಿಸೆಂಬರ್ ಒಳಗೆ 2025-26ನೇ ವಿತ್ತ ವರ್ಷದ ಆರ್‌ಕೆವಿವೈ ವಾರ್ಷಿಕ ಕಾರ್ಯ ಯೋಜನೆಯನ್ನು ಅಂತಿಮಗೊಳಿಸುವಂತೆ ಡಾ. ಚತುರ್ವೇದಿ ರಾಜ್ಯಗಳಿಗೆ ಸಲಹೆ ನೀಡಿದರು.
ಸಾಲದ ಲಭ್ಯತೆಯನ್ನು ಹೆಚ್ಚಿಸಲು ಇರುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ (ಕೆಸಿಸಿ), ಬೆಳೆ ಅಪಾಯವನ್ನು ಕಡಿಮೆಗೊಳಿಸಲು ಇರುವ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ (ಪಿಎಂಎಫ್‌ಬಿವೈ) ಹಾಗೂ ಬೆಳೆ ವಿಮೆ, ಕೃಷಿಯ ಸುಧಾರಿತ ದತ್ತಾಂಶಕ್ಕಿರುವ ಡಿಜಿಟಲ್ ಕೃಷಿ ಯೋಜನೆ ಒಳಗೊಂಡಂತೆ ಪ್ರಮುಖ ಯೋಜನೆಗಳನ್ನು ಸಮಗ್ರವಾಗಿ ಪರಿಶೀಲಿಸಲಾಯಿತು.