ಅದಾನಿ ಸಮೂಹಕ್ಕೆ ಮಂಜೂರು ಮಾಡಲಾಗಿದ್ದ 108 ಹೆಕ್ಟೇರ್ ಪ್ರದೇಶವನ್ನು ಹಿಂಪಡೆಯಲಾಗುವುದು: ಹೈಕೋರ್ಟ್ ಗೆ ತಿಳಿಸಿದ ಗುಜರಾತ್ ಸರಕಾರ

Update: 2024-07-07 06:20 GMT

ಸಾಂದರ್ಭಿಕ ಚಿತ್ರ (PTI)

ಅಹಮದಾಬಾದ್: ಕುಛ್ ಜಿಲ್ಲೆಯ ಮುಂದ್ರಾ ಬಂದರಿನ ಬಳಿ ಇರುವ ನವಿನಾಲ್ ಗ್ರಾಮಸ್ಥರು 13 ವರ್ಷಗಳ ಕಾಲ ನಡೆಸಿದ ದಣಿವರಿಯದ ಕಾನೂನು ಹೋರಾಟಕ್ಕೆ ಕೊನೆಗೂ ಮಣಿದಿರುವ ಗುಜರಾತ್ ಸರಕಾರ, ಅದಾನಿ ಸಮೂಹ ಸಂಸ್ಥೆಗೆ ಮಂಜೂರು ಮಾಡಿದ್ದ 108 ಹೆಕ್ಟೇರ್ ಹುಲ್ಲುಗಾವಲು ಪ್ರದೇಶವನ್ನು ಮರಳಿ ಅವರಿಗೇ ನೀಡಲು ನಿರ್ಧರಿಸಿದೆ ಎಂದು telegraphindia.com ವರದಿ ಮಾಡಿದೆ.

2005ರಲ್ಲಿ ಅದಾನಿ ಪೋರ್ಟ್ಸ್ ಹಾಗೂ ಎಸ್ಇಝೆಡ್ ಲಿಮಿಟೆಡ್ ಗೆ ಮಂಜೂರು ಮಾಡಲಾಗಿದ್ದ ಕುಛ್ ಜಿಲ್ಲೆಯಲ್ಲಿನ ಮುಂದ್ರಾ ಬಂದರಿನ ಬಳಿ ಇರುವ 108 ಹೆಕ್ಟೇರ್ ಹುಲ್ಲುಗಾವಲು ಪ್ರದೇಶವನ್ನು ಮರಳಿ ಪಡೆಯಲಾಗುವುದು ಎಂದು ಗುಜರಾತ್ ಸರಕಾರವು ಶುಕ್ರವಾರ ಗುಜರಾತ್ ಹೈಕೋರ್ಟ್ ಗೆ ಮಾಹಿತಿ ನೀಡಿದೆ.

ರಾಜ್ಯ ಕಂದಾಯ ಇಲಾಖೆಯು 2005ರಲ್ಲೇ 231 ಎಕರೆ ಹುಲ್ಲುಗಾವಲು ಪ್ರದೇಶವನ್ನು ಅದಾನಿ ಸಮೂಹಕ್ಕೆ ಮಂಜೂರು ಮಾಡಿದ್ದರೂ, 2010ರಲ್ಲಿ ಎಪಿಎಸ್ಇಝೆಡ್ ಸಂಸ್ಥೆಯು ಈ ಹುಲ್ಲುಗಾವಲಿನ ಸುತ್ತ ಬೇಲಿ ಹಾಕಲು ಪ್ರಾರಂಭಿಸಿದಾಗಲಷ್ಟೆ ಈ ಕುರಿತು ನವಿನಾಲ್ ಗ್ರಾಮಸ್ಥರಿಗೆ ಈ ಸಂಗತಿಗೆ ಅರಿವಿಗೆ ಬಂದಿದೆ. ಇಷ್ಟು ದೊಡ್ಡ ಪ್ರಮಾಣದ ಹುಲ್ಲುಗಾವಲು ಪ್ರದೇಶವನ್ನು ಅದಾನಿ ಸಮೂಹ ಸಂಸ್ಥೆಗೆ ಮಂಜೂರು ಮಾಡಿರುವುದರಿಂದ ನಮಗೆ ಕೇವಲ 45 ಎಕರೆಯಷ್ಟು ಹುಲ್ಲುಗಾವಲು ಪ್ರದೇಶ ಮಾತ್ರ ಉಳಿದಿದೆ ಎಂದು ನವಿನಾಲ್ ಗ್ರಾಮಸ್ಥರು ಈ ಸಂದರ್ಭದಲ್ಲಿ ತರಕಾರು ತೆಗೆದಿದ್ದರು.

ಈ ಕುರಿತು ಗುಜರಾತ್ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದ ನವಿನಾಲ್ ಗ್ರಾಮಸ್ಥರು, ಗ್ರಾಮವು ಈಗಾಗಲೇ ಹುಲ್ಲುಗಾವಲು ಪ್ರದೇಶದ ಕೊರತೆಯನ್ನು ಅನುಭವಿಸುತ್ತಿರುವುದರಿಂದ ಈ ವರ್ಗಾವಣೆಯು ಅಕ್ರಮ ಎಂದು ವಾದಿಸಿದ್ದರು. ಎಪಿಎಸ್ಇಝೆಡ್ ಗೆ ಮಂಜೂರು ಮಾಡಲಾಗಿರುವ ಹುಲ್ಲುಗಾವಲು ಪ್ರದೇಶವು ಸಾರ್ವತ್ರಿಕ ಭೂಮಿಯಾಗಿದ್ದು, ಸಮುದಾಯದ ಸಂಪನ್ಮೂಲವಾಗಿದೆ ಎಂದೂ ವಾದಿಸಿದ್ದರು.

ಆದರೆ, ಜಿಲ್ಲಾಧಿಕಾರಿಗಳು ಗ್ರಾಮಸ್ಥರಿಗೆ ಹೆಚ್ಚುವರಿಯಾಗಿ 387 ಹೆಕ್ಟೇರ್ ಸರಕಾರಿ ಭೂಮಿಯನ್ನು ಹುಲ್ಲುಗಾವಲಿಗೆ ಮಂಜೂರು ಮಾಡಲು ಆದೇಶಿಸಿದ್ದಾರೆ ಎಂದು ರಾಜ್ಯ ಸರಕಾರವು ನ್ಯಾಯಾಲಯಕ್ಕೆ ತಿಳಿಸಿದ್ದರಿಂದ, 2014ರಲ್ಲಿ ಈ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಿಲೇವಾರಿ ಮಾಡಿತ್ತು.

ಆದರೆ, ರಾಜ್ಯ ಸರಕಾರ ಹೇಳಿದಂತೆ ಹುಲ್ಲುಗಾವಲಿಗೆ ಭೂಮಿ ಮಂಜೂರಾಗದೆ ಇದ್ದಿದ್ದರಿಂದ, ಗ್ರಾಮಸ್ಥರು ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಿದ್ದರು. 2015ರಲ್ಲಿ ಪರಾಮರ್ಶೆ ಅರ್ಜಿಯನ್ನು ಸಲ್ಲಿಸಿದ್ದ ರಾಜ್ಯ ಸರಕಾರವು, ನವಿನಾಲ್ ಗ್ರಾಮ ಪಂಚಾಯತಿಗೆ ಮಂಜೂರು ಮಾಡಲು ಉಳಿದಿರುವ ಭೂಮಿ ಕೇವಲ 17 ಹೆಕ್ಟೇರ್ ನಷ್ಟಿದೆ ಎಂದು ಹೈಕೋರ್ಟ್ ಗೆ ತಿಳಿಸಿತ್ತು.

ಉಳಿದ ಭೂಮಿಯನ್ನು ನವಿನಾಲ್ ಗ್ರಾಮದಿಂದ 7 ಕಿಮೀ ದೂರವಿರುವ ಪ್ರದೇಶದಲ್ಲಿ ಮಂಜೂರು ಮಾಡಲಾಗುವುದು ಎಂಬ ರಾಜ್ಯ ಸರಕಾರದ ಪ್ರಸ್ತಾವವನ್ನು ನವಿನಾಲ್ ಗ್ರಾಮಸ್ಥರು ತಿರಸ್ಕರಿಸಿದ್ದರು.

ಎಪ್ರಿಲ್ 2024ರಲ್ಲಿ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಹಾಗೂ ನ್ಯಾ. ಪ್ರಣವ್ ತ್ರಿವೇದಿಯವರನ್ನೊಳಗೊಂಡ ವಿಭಾಗೀಯ ಪೀಠವು, ಈ ಕುರಿತು ಪರಿಹಾರ ಕಂಡುಕೊಳ್ಳುವಂತೆ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿತ್ತು.

ಆದರೆ, ಎಪಿಎಸ್ಇಝೆಡ್‍ ಗೆ ಮಂಜೂರು ಮಾಡಲಾಗಿದ್ದ ಸುಮಾರು 108 ಹೆಕ್ಟೇರ್ (266 ಎಕರೆ) ಹುಲ್ಲುಗಾವಲು ಪ್ರದೇಶವನ್ನು ಹಿಂಪಡೆಯಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಅವರು ಶುಕ್ರವಾರ ನ್ಯಾಯಪೀಠಕ್ಕೆ ಮಾಹಿತಿ ನೀಡಿದ್ದಾರೆ.

ಗ್ರಾಮಸ್ಥರಿಗೆ 129 ಹೆಕ್ಟೇರ್ ಭೂಮಿಯನ್ನು ಹುಲ್ಲುಗಾವಲು ಪ್ರದೇಶವನ್ನಾಗಿ ಮರು ಮಂಜೂರು ಮಾಡಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದ ರಾಜ್ಯ ಸರಕಾರವು, ಅದಕ್ಕಾಗಿ ಒಂದಿಷ್ಟು ಸರಕಾರಿ ಭೂಮಿಯೊಂದಿಗೆ ಅದಾನಿ ಸಮೂಹ ಸಂಸ್ಥೆಗೆ ಮಂಜೂರು ಮಾಡಲಾಗಿರುವ 108 ಹೆಕ್ಟೇರ್ ಭೂಮಿಯನ್ನು ಹಿಂಪಡೆದು ಗ್ರಾಮಸ್ಥರಿಗೆ ನೀಡಲಾಗುವುದು ಎಂದು ಹೇಳಿದೆ.

ಈ ಪರಿಹಾರವನ್ನು ಜಾರಿಗೊಳಿಸಿ ಎಂದು ರಾಜ್ಯ ಸರಕಾರಕ್ಕೆ ಸೂಚಿಸಿದ ನ್ಯಾಯಪೀಠವು, ಅರ್ಜಿ ವಿಚಾರಣೆಯನ್ನು ಸದ್ಯ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News