ಸ್ವಾತಂತ್ರ್ಯ ದಿನಕ್ಕೆ ನರ್ಸ್, ರೈತರು ಸೇರಿ 1800 ವಿಶೇಷ ಅತಿಥಿಗಳು

Update: 2023-08-13 02:31 GMT

ಕೆಂಪುಕೋಟೆ. |  Photo : PTI 

ಹೊಸದಿಲ್ಲಿ: ಐತಿಹಾಸಿಕ ಕೆಂಪುಕೋಟೆಯಲ್ಲಿ ಈ ತಿಂಗಳ 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭಕ್ಕೆ ಐವತ್ತು ಮಂದಿ ನರ್ಸ್‍ಗಳು, ಅವರ ಕುಟುಂಬ ಸದಸ್ಯರು ಸೇರಿದಂತೆ 1800 ಮಂದಿ ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸಮಾಜದ ವಿವಿಧ ವರ್ಗಗಳಿಂದ ಸರ್ಕಾರ ಆಯ್ಕೆ ಮಾಡಿ ಈ ವಿಶೇಷ ಅತಿಥಿಗಳನ್ನು ಆಹ್ವಾನಿಸಿದೆ. "ನರ್ಸಿಂಗ್ ವೃತ್ತಿಯನ್ನು ಗುರುತಿಸಿರುವುದು ಒಳ್ಳೆಯ ಬೆಳವಣಿಗೆ. ಆಸ್ಪತ್ರೆ ಸೇವೆಗಳನ್ನು ಮುನ್ನಡೆಸುವಲ್ಲಿ ನರ್ಸ್‍ಗಳ ಪಾತ್ರದ ಬಗ್ಗೆ ಕೋವಿಡ್ ಬಳಿಕ ಜನರಲ್ಲಿ ಹೆಚ್ಚು ಅರಿವು ಮೂಡಿದೆ" ಎಂದು ಕುಟುಂಬದ ಜತೆ ಸಮಾರಂಭಕ್ಕೆ ಆಹ್ವಾನಿತರಾಗಿರುವ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಹಿರಿಯ ನರ್ಸಿಂಗ್ ಅಧಿಕಾರಿ ನಿಧಿ ಬೇಳಾ ಹೇಳಿದ್ದಾರೆ.

ಫರೀದಾಬಾದ್ ಬಾದ್‍ಷಾ ಖಾನ್ ಸಿವಿಲ್ ಆಸ್ಪತ್ರೆಯ ರಕ್ತಬ್ಯಾಂಕ್‍ನಲ್ಲಿ ನರ್ಸಿಂಗ್ ಅಧಿಕಾರಿಯಾಗಿರುವ ಸವಿತಾ ರಾಣಿ ಆಹ್ವಾನಿತರಾಗಿರುವ ಮತ್ತೊಬ್ಬರು. ಕೋವಿಡ್-19 ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಕ್ಕಾಗಿ ರಾಷ್ಟ್ರಪತಿ ದ್ರೌಪತಿ ಮುರ್ಮು ಇವರನ್ನು ನರ್ಸಿಂಗ್ ದಿನಾಚರಣೆಯಂದು ಸನ್ಮಾನಿಸಿದ್ದರು.

ಕೋವಿಡ್-19 ನಿರ್ವಹಣೇ ವೇಳೆ ಉಸ್ತುವಾರಿ ಹೊಣೆ ಹೊಂದಿದ್ದ ಹಿಂದೂರಾವ್ ಆಸ್ಪತ್ರೆಯ ಸಹಾಯಕ ನರ್ಸಿಂಗ್ ಅಧೀಕ್ಷಕಿ ವೀರಮತಿ ಕೂಡಾ ಆಯ್ಕೆಯಾದ ಮತ್ತೊಬ್ಬರು. ಈ ಪ್ರತಿಷ್ಠಿತ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಅವರು ಹೇಳಿದ್ದಾರೆ. ಒಳ್ಳೆಯ ಪಂಚಾಯ್ತಿಗಳ ಸರಪಂಚರು, ಶಿಕ್ಷಕರು, ರೈತರು ಮತ್ತು ಮೀನುಗಾರರನ್ನು ಕೂಡಾ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News