ಬಿಎಸ್ಎಫ್ ಅಕಾಡೆಮಿಯಿಂದ ಇಬ್ಬರು ಮಹಿಳಾ ಪೊಲೀಸರು ನಾಪತ್ತೆ!
ಭೋಪಾಲ್: ಮಧ್ಯಪ್ರದೇಶದ ಗ್ವಾಲಿಯರ್ ಬಳಿಯ ತೇಕನಾಪುರದಲ್ಲಿರುವ ಬಿಎಸ್ಎಫ್ ಅಕಾಡೆಮಿಯಿಂದ ಒಂದು ತಿಂಗಳ ಮೊದಲು ನಾಪತ್ತೆಯಾಗಿರುವ ಇಬ್ಬರು ಮಹಿಳಾ ಪೊಲೀಸರಿಗಾಗಿ ಹಲವು ಏಜೆನ್ಸಿಗಳು ಶೋಧ ಕಾರ್ಯಾಚರಣೆ ಮುಂದುವರಿಸಿವೆ. ಅಂತರರಾಷ್ಟ್ರೀಯ ಗಡಿಗಳಲ್ಲಿರುವ ಬಿಎಸ್ಎಫ್ ಘಟಕಗಳಿಗೆ ಕೂಡಾ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಜಬಲ್ಪುರದ ಆಕಾಂಕ್ಷಾ ನಿಖಾರ್ ಮತ್ತು ಬಂಗಾಳದ ಮುರ್ಷಿದಾಬಾಧ್ನ ಶಹನಾ ಖಾಟೂನ್ ಅವರು 2021ರಿಂದ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಇವರು 2024ರ ಜೂನ್ 6ರಂದು ಕಣ್ಮರೆಯಾಗಿದ್ದರು.
ಈ ಇಬ್ಬರ ಫೋನ್ಗಳ ಜಾಡು ಹಿಡಿದಾಗ ಸಂಶಯಾತ್ಮಕ ಚಟುವಟಿಕೆಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದು, ತನಿಖೆ ಅನಿರೀಕ್ಷಿತ ತಿರುವು ಪಡೆದಿದೆ. ಇವರ ಫೋನ್ ಬಳಕೆ ಸ್ಥಳಗಳು ದೆಹಲಿ, ಹೌರಾ ಮತ್ತು ಬೆಹ್ರಾಂಪುರವನ್ನು ತೋರಿಸುತ್ತಿವೆ.
ಫೋನ್ ದಾಖಲೆಗಳನ್ನು ಮತ್ತು ಹಲವು ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳು ವಿಶ್ಲೇಷಿಸುತ್ತಿದ್ದು, ವಿವಿಧ ರಾಜ್ಯಗಳಿಗೆ ಇವರು ಪ್ರಯಾಣ ಕೈಗೊಳ್ಳಲು ಏನು ಕಾರಣ ಎಂಬ ಅಂಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಇಬ್ಬರು ಪಶ್ಚಿಮ ಬಂಗಾಳದ ಶಹಾನಾ ಕುಟುಂಬದ ಜತೆಗೆ ಇವರಿಗೆ ಸಂಪರ್ಕ ಇದೆಯೇ ಹಾಗೂ ಈ ಇಬ್ಬರ ನಡುವೆ ಸಂಪರ್ಕ ಇದೆಯೇ ಎಂದು ಪರಿಶೀಲಿಸಲಗುತ್ತಿದೆ.