ತಾರಕ್ಕೇರಿದ ಕುಟುಂಬಗಳ ನಡುವೆ ಜಮೀನು ಜಗಳ | ರಸ್ತೆ ಕಾಮಗಾರಿ ತಡೆದಿದ್ದಕ್ಕೆ ಜೀವಂತ ಸಮಾಧಿಗೆ ಯತ್ನ!

Update: 2024-07-21 17:00 GMT

Photo : X

ಭೋಪಾಲ್‌ : ಎರಡು ಕುಟುಂಬಗಳ ಜಮೀನು ಜಗಳದಿಂದಾಗಿ ರಸ್ತೆ ಕಾಮಗಾರಿ ವಿರೋಧಿಸಿ ಪ್ರತಿಭಟಿಸಿದ ಮಹಿಳೆಯರ ಮೇಲೆ ಟಿಪ್ಪರ್‌ ನಿಂದ ಕಲ್ಲು ಮಣ್ಣು ಸುರಿದು ಜೀವಂತ ಸಮಾಧಿಗೆ ಪ್ರಯತ್ನಿಸಿದ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ.

ಮಧ್ಯಪ್ರದೇಶದ ರೇವಾ ಜಿಲ್ಲೆಯ ಹಿನೌಟಾದಲ್ಲಿ ಎರಡು ಕುಟುಂಬಗಳ ನಡುವೆ ಜಮೀನು ಜಗಳ ನಡೆಯುತ್ತಿತ್ತು. ಒಂದು ಕಡೆಯ ಗುಂಪು ಜಮೀನಿನ ಮೂಲಕ ರಸ್ತೆ ನಿರ್ಮಾಣ ಕಾಮಗಾರಿ ಮಾಡುತ್ತಿದ್ದರು. ಅದನ್ನು ಇನ್ನೊಂದು ಕಡೆಯ ಗುಂಪು ವಿರೋಧಿಸುತ್ತಿತ್ತು ಎಂದು ತಿಳಿದು ಬಂದಿದೆ.

ಆದರೂ ಕಾಮಗಾರಿ ಮುಂದುವರೆಯುತ್ತಿತ್ತು. ಇದನ್ನು ವಿರೋಧಿಸಿ ಇನ್ನೊಂದು ಗುಂಪಿನ ಮಹಿಳೆಯರು ಜಮೀನಿನಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದರು. ಆಗ ಕಾಮಗಾರಿ ನಡೆಸುತ್ತಿದ್ದ ಗುಂಪಿನ ಆದೇಶದಂತೆ ಟಿಪ್ಪರ್‌ ಚಾಲಕ, ಕಲ್ಲು ಮಣ್ಣನ್ನು ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯರ ಮೇಲೆ ತಂದು ಸುರಿದು, ಜೀವಂತ ಸಮಾಧಿಗೆ ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.

ಘಟನೆಯ ವೀಡಿಯೊ ವೈರಲಾಗಿದ್ದು, ಕಲ್ಲು ಮಣ್ಣುಗಳ ರಾಶಿಯಲ್ಲಿ ಮಹಿಳೆಯರು ಕುತ್ತಿಗೆಯವರೆಗೂ ಹೂತು ಹೋಗಿರುವುದು, ರಕ್ಷಿಸಲು ಅಂಗಲಾಚುತ್ತಿರುವುದು ಕಾಣಬಹುದು.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೇವಾ ಜಿಲ್ಲೆಯ ಎಸ್ಪಿ ವಿವೇಕ್ ಸಿಂಗ್ ಅವರು, “ಘಟನೆ ನಿನ್ನೆ ನಡೆದಿದೆ. ಇದು ಎರಡು ಕಡೆಯ ಕುಟುಂಬಗಳ ಜಮೀನು ವಿವಾದ. ಒಂದು ಕಡೆಯವರು ರಸ್ತೆ ಮಾಡಲು ಬಯಸಿದ್ದರು. ಅದಕ್ಕಾಗಿ ಕಲ್ಲು ಮಣ್ಣು ತುಂಬಿಸುತ್ತಿದ್ದರು. ಆ ಸಂದರ್ಭ ಪ್ರತಿಭಟಿಸುತ್ತಿದ್ದ ಇನ್ನೊಂದು ಕಡೆಯ ಮಹಿಳೆಯರ ಮೇಲೆ ಕಲ್ಲು ಮಣ್ಣಿನ ರಾಶಿಯನ್ನು ಸುರಿದಿದ್ದಾರೆ. ಬಿಎನ್‌ಎಸ್‌ನ ಸೆಕ್ಷನ್ 110 ರ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಮಹಿಳೆಯರ ಪೈಕಿ ಓರ್ವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News