ದೇಣಿಗೆ ಸಂಗ್ರಹ ವೆಬ್ ಸೈಟ್ ಮೇಲೆ 20,400 ಸೈಬರ್ ದಾಳಿ: ಕಾಂಗ್ರೆಸ್
ಹೊಸದಿಲ್ಲಿ: ಎರಡು ದಿನಗಳ ಹಿಂದಷ್ಟೇ ಆರಂಭಗೊಂಡಿರುವ ತನ್ನ ದೇಣಿಗೆ ಸಂಗ್ರಹ ವೆಬ್ ಸೈಟ್ ಮೇಲೆ 20,400 ಸೈಬರ್ ದಾಳಿಗಳು ನಡೆದಿವೆ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ. ವೆಬ್ ಸೈಟ್ ನಿಂದ ದತ್ತಾಂಶ ಕಳವಿಗೆ ಪ್ರಯತ್ನಿಸಲಾಗಿದೆ ಮತ್ತು ಅದರ ಕಾರ್ಯನಿರ್ವಹಣೆಯನ್ನು ನಿಧಾನಗೊಳಿಸಲು ಪ್ರಯತ್ನಿಸಲಾಗಿದೆ ಎಂದು ಅದು ಆರೋಪಿಸಿದೆ.
ವೆಬ್ ಸೈಟ್ ಗೆ 48 ಗಂಟೆಗಳಲ್ಲಿ 1.2 ಕೋಟಿ ಜನರು ಭೇಟಿ ನೀಡಿದ್ದಾರೆ. ಆದರೆ, ದುರದೃಷ್ಟದ ಅಂಶವೆಂದರೆ, ಈ ಪೈಕಿ 20,400 ಸೈಬರ್ ದಾಳಿಗಳು ಎಂದು ಹಿರಿಯ ನಾಯಕರೊಬ್ಬರು ಹೇಳಿದರು. ಈ ಪೈಕಿ, 1340 ದಾಳಿಗಳು ವೆಬ್ ಸೈಟ್ ನಿಂದ ಅಂಕಿಅಂಶಗಳನ್ನು ಕದಿಯಲು ಪ್ರಯತ್ನಿಸಿದರೆ, ಉಳಿದವುಗಳು ಅದನ್ನು ನಿಧಾನಗೊಳಿಸಲು ಯತ್ನಿಸಿದವು ಎಂದು ಅವರು ಹೇಳಿಕೊಂಡಿದ್ದಾರೆ.
‘‘ಈ ದಾಳಿಗಳನ್ನು ನಾವು ಮೊದಲೇ ಊಹಿಸಿದ್ದೆವು. ಹಾಗಾಗಿ, ದಾಳಿಗಳನ್ನು ತಡೆಯಲು ಬಲಿಷ್ಠ ಫೈರ್ ವಾಲ್ ಗಳನ್ನು ನಿರ್ಮಿಸಿದ್ದೆವು’’ ಎಂದು ಅವರು ತಿಳಿಸಿದರು.
ಆದರೂ, ಈ ಎಲ್ಲಾ ಅಡೆತಡೆಗಳನ್ನು ಮೀರಿ 1.13 ಲಕ್ಷ ದೇಣಿಗೆದಾರರಿಂದ 2.81 ಕೋಟಿ ರೂಪಾಯಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅದು ತಿಳಿಸಿದೆ.
ಬುಧವಾರ ಬೆಳಗ್ಗೆ 9 ಗಂಟೆಯವರೆಗೆ, ಒಟ್ಟು 1,13,713 ಜನರು ದೇಣಿಗೆ ನೀಡಿದ್ದಾರೆ. ಈ ಪೈಕಿ ಕೇವಲ 32 ಮಂದಿ ಒಂದು ಲಕ್ಷಕ್ಕಿಂತಲೂ ಅಧಿಕ ದೇಣಿಗೆ ನೀಡಿದ್ದಾರೆ. ಅದರಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಜೈರಾಮ್ ರಮೇಶ್ ಮತ್ತು ಪವನ್ ಖೇರ ಸೇರಿದ್ದಾರೆ. 612 ಮಂದಿ 13,800 ರೂ.ಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿದ್ದಾರೆ.
ಕಾಂಗ್ರೆಸ್ ಆನ್ ಲೈನ್ ದೇಣಿಗೆ ಸಂಗ್ರಹ ಅಭಿಯಾನವನ್ನು ಸೋಮವಾರ ಆರಂಭಿಸಿತ್ತು. ಖರ್ಗೆ 1.38 ಲಕ್ಷ ರೂ. ದೇಣಿಗೆ ನೀಡಿದ್ದರು.
ಒಟ್ಟು ಸಂಗ್ರಹವಾದ 2.81 ಕೋಟಿ ರೂ. ಮೊತ್ತದಲ್ಲಿ ಗರಿಷ್ಠ, ಅಂದರೆ 56 ಲಕ್ಷ ರೂಪಾಯಿ ಮಹಾರಾಷ್ಟ್ರದಿಂದ ಬಂದಿದೆ. ನಂತರದ ಸ್ಥಾನದಲ್ಲಿ ರಾಜಸ್ಥಾನ (26 ಲಕ್ಷ ರೂಪಾಯಿ), ದಿಲ್ಲಿ (20 ಲಕ್ಷ ರೂ.), ಉತ್ತರಪ್ರದೇಶ (19 ಲಕ್ಷ ರೂ.) ಮತ್ತು ಕರ್ನಾಟಕ (18 ಲಕ್ಷ ರೂ.) ಇದೆ.