ಮಾರಿಯೊ ಮಿರಾಂಡ ಆರ್ಟ್ ಗ್ಯಾಲರಿಗೆ 25 ಕೋ.ರೂ. ಮಾನಹಾನಿ ನೋಟಿಸ್ ರವಾನಿಸಿದ ಜಿ20 ಆಯೋಜಕರು
ಪಣಜಿ : ತನ್ನ ಗೌರವಕ್ಕೆ ಧಕ್ಕೆ ತಂದಿರುವುದಕ್ಕಾಗಿ 25 ಕೋ.ರೂ. ಪರಿಹಾರ ನೀಡುವಂತೆ ಆಗ್ರಹಿಸಿ ಗೋವಾದಲ್ಲಿ ಜಿ 20 ಶೃಂಗ ಸಭೆ ಆಯೋಜಿಸಿದ್ದ ಖಾಸಗಿ ಏಜೆನ್ಸಿ ಚಿತ್ರ ಕಲಾವಿದ ಮಾರಿಯೊ ಮಿರಾಂಡ ಅವರ ಆರ್ಟ್ ಗ್ಯಾಲರಿಗೆ ಮಾನಹಾನಿ ನೋಟಿಸು ರವಾನಿಸಿದೆ.
ಜಿ20 ಕಾರ್ಯಕ್ರಮದ ಪ್ರಚಾರಕ್ಕೆ ಚಿತ್ರ ಕಲಾವಿದ ಮಾರಿಯೊ ಮಿರಾಂಡ ಅವರ ಕಲಾಕೃತಿಯನ್ನು ಅನಧಿಕೃತವಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಮಾರಿಯೊ ಗ್ಯಾಲರಿ ಜುಲೈ 2ರಂದು ಕಾರ್ಯಕ್ರಮ ಆಯೋಜಿಸಿದ್ದ ಏಜೆನ್ಸಿ ಸಿಯಾನ್ ಆ್ಯಡ್ಇವೆಂಟ್ ಹಾಗೂ ಗೋವಾ ಮುಖ್ಯ ಕಾಯರ್ದರ್ಶಿಗೆ ನೋಟಿಸು ರವಾನಿಸಿತ್ತು. ಮಿರಾಂಡ ಅವರ ಕಲಾಕೃತಿಯನ್ನು ಬಳಸಲು ಎಜೆನ್ಸಿ ಹಾಗೂ ಗೋವಾ ಆಡಳಿತ ಅನುಮತಿ ತೆಗೆದುಕೊಳ್ಳಬೇಕೆಂದು ಗ್ಯಾಲರಿ ಆಗ್ರಹಿಸಿತ್ತು.
ಇದಕ್ಕೆ ಪ್ರತಿಕ್ರಿಯೆಯಾಗಿ ಕಾರ್ಯಕ್ರಮ ಆಯೋಜಿಸಿದ್ದ ಏಜೆನ್ಸಿ ಸಿಯಾನ್ ಆ್ಯಡ್ ಇವೆಂಟ್, ಮಿರಾಂಡ ಅವರ ಕಲಾಕೃತಿಯ ಮೇಲೆ ಮಾರಿಯೊ ಗ್ಯಾಲರಿಗೆ ಯಾವುದೇ ಹಕ್ಕಿಲ್ಲ ಎಂದು ಪ್ರತಿಪಾದಿಸಿ ಜುಲೈ 10ರಂದು ಮಾನ ಹಾನಿ ನೋಟಿಸ್ ಕಳುಹಿಸಿದೆ ಎಂದು ಗ್ಯಾಲರಿಯ ಕ್ಯುರೇಟರ್ ಜೆರಾಲ್ಡ್ ಡಾ ಕುನ್ಹಾ ಸೋಮವಾರ ಹೇಳಿದ್ದಾರೆ. ಅಲ್ಲದೆ, ಏಜೆನ್ಸಿ ಈ ಕಲಾಕೃತಿ ಮಾರಿಯೊ ಅವರಿಗೆ ಸೇರಿದ್ದಲ್ಲ ಎಂದು ಹೇಳಿದೆ.
ತಮ್ಮ ಗೌರವಕ್ಕೆ ಧಕ್ಕೆ ಉಂಟಾಗಿರುವುದರಿಂದ 25 ಕೋ.ರೂ. ಪರಿಹಾರ ನೀಡುವಂತೆ ಅದು ಕೋರಿದೆ ಎಂದು ಡಾ ಕುನ್ಹಾ ತಿಳಿಸಿದ್ದಾರೆ. ಜಿ20 ಕಾರ್ಯಕ್ರಮದ ಪ್ರಚಾರಕ್ಕೆ ಮಿರಾಂಡ ಅವರ ಕಲಾಕೃತಿ ಬಳಸುವುದಕ್ಕೆ ಮಾರಿಯೊ ಗ್ಯಾಲರಿಗೆ ಯಾವುದೇ ಆಕ್ಷೇಪ ಇಲ್ಲ. ಆದರೆ, ಆಯೋಜಕರು ಅನುಮತಿ ಪಡೆದುಕೊಳ್ಳಬೇಕು. ಪ್ರತಿಯೊಬ್ಬರೂ ಅನುಮತಿ ಪಡೆದುಕೊಳ್ಳಬೇಕು... ಭಾರತೀಯ ನೌಕಾ ಪಡೆ, ವಿಮಾನ ನಿಲ್ದಾಣ ಪ್ರಾಧಿಕಾರ, ಆದಾಯ ತೆರಿಗೆ ಇಲಾಖೆ...ಹೀಗೆ ಎಲ್ಲರೂ ಅನುಮತಿ ಪಡೆದುಕೊಳ್ಳಬೇಕು ಎಂದು ಡಾ ಕುನ್ಹಾ ಹೇಳಿದ್ದಾರೆ.