ಆಂಧ್ರದಲ್ಲಿ ಶೇಕಡ 4ರಷ್ಟು ಮುಸ್ಲಿಂ ಕೋಟಾ ಮುಂದುವರಿಕೆ: ನಾಯ್ಡು ಪುತ್ರ ಸ್ಪಷ್ಟನೆ

Update: 2024-06-08 03:22 GMT

PC: x.com/vamsikaka

ವಿಜಯವಾಡ: ಇತರ ಹಿಂದುಳಿದ ವರ್ಗಗಳ ಪೈಕಿ ಮುಸ್ಲಿಮರಿಗೆ ನೀಡಿರುವ ಶೇಕಡ 4ರಷ್ಟು ಮೀಸಲಾತಿಯನ್ನು ಮುಂದುವರಿಸಲು ತೆಲುಗುದೇಶಂ ಪಕ್ಷ ಬದ್ಧವಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಚಂದ್ರಬಾಬು ನಾಯ್ಡು ಪುತ್ರ ನರಾ ಲೋಕೇಶ್ ಸ್ಪಷ್ಟಪಡಿಸಿದ್ದಾರೆ.

ಮಿತ್ರಪಕ್ಷವಾದ ಬಿಜೆಪಿಯ ನಿಲುವಿಗೆ ವಿರುದ್ಧವಾದ ಈ ನಿಲುವನ್ನು ಸ್ಪಷ್ಟಪಡಿಸಿದ ಅವರು, ಬಡ ಮುಸ್ಲಿಮರು ಬಡತನದಿಂದ ಹೊರಬರುವ ಸಲುವಾಗಿ ನೆರವು ನೀಡುವುದು ಈ ಕಲ್ಯಾಣ ಯೋಜನೆಯ ಉದ್ದೇಶ ಎಂದು ಹೇಳಿದ್ದಾರೆ. ಆದರೆ ತೆಲುಗುದೇಶಂ ಎಂದಿಗೂ ಇದನ್ನು ಮುಸ್ಲಿಂ ಓಲೈಕೆ ಕ್ರಮ ಎಂದು ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ.

"ಒಂದು ನಿರ್ದಿಷ್ಟ ಪಂಗಡ ಬಡತನದಲ್ಲಿ ಜೀವಿಸುತ್ತಿದ್ದರೆ, ಆ ರಾಜ್ಯ ಅಥವಾ ದೇಶವನ್ನು ಮುಂದುವರಿದ ದೇಶ ಎಂದು ಯಾರೂ ಹೇಳಲು ಸಾಧ್ಯವಿಲ್ಲ" ಎಂಬುವುದು ಅವರ ಸ್ಪಷ್ಟ ಅಭಿಮತ.

"ಕಡಿಮೆ ಪ್ರಾತಿನಿಧ್ಯ ಇರುವ ಸಮುದಾಯಗಳಿಗೆ ಅವಕಾಶಗಳನ್ನು ಸೃಷ್ಟಿಸುವಂತಹ ನೀತಿಗಳನ್ನು ಸರ್ಕಾರಗಳು ಜಾರಿಗೊಳಿಸಬೇಕು. ಮುಸ್ಲಿಮರಿಗೆ ಶೇಕಡ 4ರಷ್ಟು ಮೀಸಲಾತಿ ನೀಡುವ ನಿರ್ಧಾರವನ್ನು ಆ ದೃಷ್ಟಿಕೋನದಿಂದ ಕೈಗೊಳ್ಳಲಾಗಿದೆಯೇ ವಿನಃ ರಾಜಕೀಯ ಲಾಭಕ್ಕಾಗಿ ಅಥವಾ ಯಾರನ್ನೂ ಓಲೈಸುವ ಉದ್ದೇಶದಿಂದ ಕೈಗೊಂಡಿಲ್ಲ ಎಂದು ವಿಶ್ಲೇಷಿಸಿದರು.

ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಸೇರಿದಂತೆ ಹಲವು ಮಂದಿ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಮುಸ್ಲಿಂ ಮೀಸಲಾತಿಯನ್ನು ಕಟುವಾಗಿ ಟೀಕಿಸಿದ್ದರು.  

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News