ದೇಶಾದ್ಯಂತ ಶೇ.44ರಷ್ಟು ಶಾಸಕರು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ: ಎಡಿಆರ್

Update: 2023-07-15 18:23 GMT

Photo creadit : ADR

ಹೊಸದಿಲ್ಲಿ: ಭಾರತದಾದ್ಯಂತ ರಾಜ್ಯ ವಿಧಾನಸಭೆಗಳ ಸುಮಾರು ಶೇ.44ರಷ್ಟು ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದನ್ನು ಘೋಷಿಸಿಕೊಂಡಿದ್ದು,ಕೇರಳ ಅಗ್ರಸ್ಥಾನದಲ್ಲಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಇತ್ತೀಚಿಗೆ ನಡೆಸಿರುವ ವಿಶ್ಲೇಷಣೆಯು ಹೇಳಿದೆ. ಎಡಿಆರ್ ಮತ್ತು ನ್ಯಾಷನಲ್ ಇಲೆಕ್ಷನ್ ವಾಚ್ (NEW) ನಡೆಸಿರುವ ವಿಶ್ಲೇಷಣೆಯು ದೇಶಾದ್ಯಂತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಲ್ಲಿಯ ಹಾಲಿ ಶಾಸಕರ ಸ್ವಯಂ ಪ್ರಮಾಣಿತ ಅಫಿಡವಿಟ್ಗಳನ್ನು ಪರಿಶೀಲಿಸಿದೆ.

ವಿಶ್ಲೇಷಣೆಯು 28 ರಾಜ್ಯ ವಿಧಾನಸಭೆಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 4,033 ಶಾಸಕರ ಪೈಕಿ 4,001 ಶಾಸಕರನ್ನು ಒಳಗೊಂಡಿತ್ತು. ವಿಶ್ಲೇಷಣೆಗೊಳಪಟ್ಟ ಶಾಸಕರ ಪೈಕಿ 1,136 ಅಥವಾ ಸುಮಾರು ಶೇ.28ರಷ್ಟು ಶಾಸಕರು ಕೊಲೆ,ಕೊಲೆ ಯತ್ನ,ಅಪಹರಣ,ಮಹಿಳೆಯರ ವಿರುದ್ಧ ಅಪರಾಧಗಳು ಇತ್ಯಾದಿ ಆರೋಪಗಳಲ್ಲಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ.

ಕೇರಳದಲ್ಲಿ 135 ಶಾಸಕರ ಪೈಕಿ 95 ಶಾಸಕರು (ಶೇ.70) ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಬಿಹಾರದಲ್ಲಿ 242ರಲ್ಲಿ 161 (ಶೇ.67),ದಿಲ್ಲಿಯಲ್ಲಿ 70ರಲ್ಲಿ 44 (ಶೇ.63),ಮಹಾರಾಷ್ಟ್ರದಲ್ಲಿ 284ರಲ್ಲಿ 175 (ಶೇ.62),ತೆಲಂಗಾಣದಲ್ಲಿ 118ರಲ್ಲಿ 72 (ಶೇ.61) ಮತ್ತು ತಮಿಳುನಾಡಿನಲ್ಲಿ 224ರಲ್ಲಿ 134 (ಶೇ.60) ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದನ್ನು ಅಫಿಡವಿಟ್ಗಳಲ್ಲಿ ಘೋಷಿಸಿದ್ದಾರೆ.

ಹೆಚ್ಚುವರಿಯಾಗಿ ದಿಲ್ಲಿಯ 70 ಶಾಸಕರ ಪೈಕಿ 37 (ಶೇ.53),ಬಿಹಾರದ 242ರಲ್ಲಿ 122 (ಶೇ.50),ಮಹಾರಾಷ್ಟ್ರದ 284ರಲ್ಲಿ 114 (ಶೇ.40),ಜಾರ್ಖಂಡ್ನ 79ರಲ್ಲಿ 31 (ಶೇ.39),ತೆಲಂಗಾಣದ 118ರಲ್ಲಿ 46 (ಶೇ.39) ಮತ್ತು ಉತ್ತರ ಪ್ರದೇಶದ 403ರಲ್ಲಿ 155 (ಶೇ.38) ಶಾಸಕರು ತಮ್ಮ ವಿರುದ್ಧ ಗಂಭೀರ ಪ್ರಕರಣಗಳಿರುವುದನ್ನು ಘೋಷಿಸಿಕೊಂಡಿದ್ದಾರೆ.

ವಿಶ್ಲೇಷಣೆಯು ಮಹಿಳೆಯರ ವಿರುದ್ಧ ಅಪರಾಧಗಳಿಗೆ ಸಂಬಂಧಿಸಿದಂತೆ ಆತಂಕಕಾರಿ ಅಂಕಿಅಂಶಗಳನ್ನೂ ಬಹಿರಂಗಗೊಳಿಸಿದೆ. ಒಟ್ಟು 114 ಶಾಸಕರು ಮಹಿಳೆಯರ ವಿರುದ್ಧ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಈ ಪೈಕಿ 14 ಶಾಸಕರು ಅತ್ಯಾಚಾರದ ಪ್ರಕರಣಗಳನ್ನು ನಿರ್ದಿಷ್ಟವಾಗಿ ಘೋಷಿಸಿರುವುದನ್ನು ವರದಿಯು ಎತ್ತಿ ತೋರಿಸಿದೆ.

ಕ್ರಿಮಿನಲ್ ದಾಖಲೆಗಳಲ್ಲದೆ ಶಾಸಕರ ಆಸ್ತಿಗಳನ್ನೂ ವಿಶ್ಲೇಷಣೆಯು ಪರಿಶೀಲಿಸಿದೆ.

ರಾಜ್ಯ ವಿಧಾನಸಭೆಗಳ ಪ್ರತಿ ಶಾಸಕನ ಸರಾಸರಿ ಆಸ್ತಿ ಮೌಲ್ಯ 13.63 ಕೋ.ರೂ.ಗಳಾಗಿವೆ. ಕ್ರಿಮಿನಲ್ ಪ್ರಕರಣಗಳಿಲ್ಲದ ಶಾಸಕರ ಸರಾಸರಿ ಆಸ್ತಿ ಮೌಲ್ಯ 11.45 ಕೋ.ರೂ.ಗಳಾಗಿದ್ದರೆ,ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿರುವ ಶಾಸಕರ ಸರಾಸರಿ ಆಸ್ತಿ ಮೌಲ್ಯ 16.36 ಕೋ.ರು.ಗಳಾಗಿವೆ.

ಆಸ್ತಿ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದ್ದು,ಪ್ರತಿ ಶಾಸಕನ ಸರಾಸರಿ ಆಸ್ತಿ ವೌಲ್ಯ 64.39 ಕೋ.ರೂ.ಗಳಾಗಿವೆ. ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ (28.24 ಕೋ.ರೂ.),ಮಹಾರಾಷ್ಟ್ರ (23.51 ಕೋ.ರೂ.) ರಾಜ್ಯಗಳಿವೆ. ತ್ರಿಪುರಾದ 59 ಶಾಸಕರು ಕನಿಷ್ಠ ಸರಾಸರಿ ಆಸ್ತಿ (1.54 ಕೋ.ರೂ.) ಹೊಂದಿದ್ದಾರೆ.

ವಿಶ್ಲೇಷಿಸಲಾದ 4,001 ಶಾಸಕರಲ್ಲಿ 88 (ಶೇ.2) ಶಾಸಕರು 100 ಕೋ.ರೂ.ಗೂ ಅಧಿಕ ವೌಲ್ಯದ ಆಸ್ತಿಗಳೊಂದಿಗೆ ಶತಕೋಟ್ಯಾಧಿಪತಿಗಳಾಗಿದ್ದಾರೆ. ಈ ಪಟ್ಟಿಯಲ್ಲಿಯೂ ಕರ್ನಾಟಕವೇ ಅಗ್ರಸ್ಥಾನದಲ್ಲಿದ್ದು,ಅದರ 224 ಶಾಸಕರ ಪೈಕಿ 32 ಶಾಸಕರು (ಶೇ.14) ಶತಕೋಟ್ಯಾಧಿಪತಿಗಳಾಗಿದ್ದಾರೆ. 59ರಲ್ಲಿ ನಾಲ್ವರು ಶಾಸಕರೊಂದಿಗೆ (ಶೇ.7) ಅರುಣಾಚಲ ಪ್ರದೇಶ ಮತ್ತು 174ರಲ್ಲಿ 10 ಶಾಸಕರೊಂದಿಗೆ (ಶೇ.6) ಆಂಧ್ರಪ್ರದೇಶ ನಂತರದ ಸ್ಥಾನಗಳಲ್ಲಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News