ಸಾಲವಂಚನೆ ಪ್ರಕರಣ: ಕಾಂಗ್ರೆಸ್ ಶಾಸಕನ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್
ಕಟಕ್: ಒಡಿಶಾ ರೂರಲ್ ಹೌಸಿಂಗ್ ಡೆವಲಪ್‍ಮೆಂಟ್ ಕಾರ್ಪೊರೇಷನ್ (ಓಆರ್‍ಎಚ್‍ಡಿಸಿ) ಸಾಲ ಹಗರಣದಲ್ಲಿ ಬಾರಾಬತಿ-ಕಟಕ್ ಕಾಂಗ್ರೆಸ್ ಶಾಸಕ ಮುಹಮ್ಮದ್ ಮೊಕೀಮ್ ಅವರ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಮಂಗಳವಾರ ಅಮಾನತುಪಡಿಸಿದೆ. ಆದರೆ ಶಿಕ್ಷೆಯನ್ನು ರದ್ದುಪಡಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಮುಂದಿನ ತಿಂಗಳು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಧಿಸುವ ಅವರ ಆಸೆಗೆ ತಣ್ಣೀರೆರಚಿದೆ.
ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ, ಎರಡು ವರ್ಷಕ್ಕಿಂತ ಹೆಚ್ಚು ಅವಧಿಯ ಶಿಕ್ಷೆಗೆ ಒಳಗಾದವರು ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮೊಹ್ಮದ್ ಮೊಕೀಮ್ ಅವರಿಗೆ 2022ರ ಸೆ. 22ರಂದು ವಿಶೇಷ ವಿಚಕ್ಷಣಾ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಕಾಂಗ್ರೆಸ್ ಶಾಸಕ ಈ ತೀರ್ಪನ್ನು ಪ್ರಶ್ನಿಸಿ ಒಡಿಶಾ ಹೈಕೋರ್ಟ್‍ನಲ್ಲಿ ಸಲ್ಲಿಸಿದ್ದ ಮನವಿ ತಿರಸ್ಕೃತಗೊಂಡಿದ್ದು, ಎ. 10ರಂದು ಜಾಮೀನು ರದ್ದುಪಡಿಸಲಾಗಿತ್ತು. ಮೊಕೀಮ್ ಸುಪ್ರೀಂಕೋರ್ಟ್‍ನಲ್ಲಿ ವಿಶೇಷ ರಜಾಕಾಲದ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠ, ಹಿರಿಯ ವಕೀಲ ಎಸ್.ಮುರಳೀಧರ್ ಮತ್ತು ಪಿತಾಂಬರ ಆಚಾರ್ಯ ಅವರ ವಾದವನ್ನು ಆಲಿಸಿ, ಒಡಿಶಾ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಮೊಕೀಮ್ ಶಿಕ್ಷೆಯನ್ನು ಅಮಾನತುಪಡಿಸಿ ಜಾಮೀನು ಮಂಜೂರು ಮಾಡಿದೆ.