ಶೇ.57ರಷ್ಟು ನಗರ ಭಾರತೀಯರಿಗೆ ಮುಂದಿನ 25 ವರ್ಷಗಳಲ್ಲಿ ಹವಾಮಾನ ಬದಲಾವಣೆಯಿಂದ ಸ್ಥಳಾಂತರದ ಭೀತಿ: ಸಮೀಕ್ಷೆ
ಹೊಸದಿಲ್ಲಿ: ನಗರ ಪ್ರದೇಶಗಳಲ್ಲಿ ವಾಸವಿರುವ ಶೇ.57ರಷ್ಟು ಭಾರತೀಯರು ಮುಂದಿನ 25 ವರ್ಷಗಳಲ್ಲಿ ಹವಾಮಾನ ಬದಲಾವಣೆಯಿಂದಾಗಿ ಸ್ಥಳಾಂತರಗೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಇಪ್ಸೋಸ್ ತನ್ನ ಸಮೀಕ್ಷಾ ವರದಿಯಲ್ಲಿ ಹೇಳಿದೆ.
ಯಾವ ನಿರ್ದಿಷ್ಟ ಹವಾಮಾನ ಬದಲಾವಣೆಗಳು ಸ್ಥಳಾಂತರಕ್ಕೆ ಕಾರಣವಾಗಲಿವೆ ಎನ್ನುವುದನ್ನು ವರದಿಯು ವಿವರಿಸಿಲ್ಲವಾದರೂ ಸಮುದ್ರ ಮಟ್ಟ ಏರಿಕೆ, ಬಿಸಿಯಾದ ತಾಪಮಾನ ಮತ್ತು ಆಗಾಗ್ಗೆ ಪ್ರತಿಕೂಲ ಹಮಾಮಾನ ಸ್ಥಿತಿ ಇವು ಪ್ರಮುಖ ಕಾರಣಗಳೆಂದು ಪರಿಗಣಿಸಲಾಗಿದೆ.
‘ಹವಾಮಾನ ಬದಲಾವಣೆ ಕುರಿತು ಜಾಗತಿಕ ಅಭಿಪ್ರಾಯಗಳು’ ಹೆಸರಿನ ಮಾದರಿ ಸಮೀಕ್ಷೆಯು ಭಾರತದಲ್ಲಿಯ 2,200 ವ್ಯಕ್ತಿಗಳನ್ನು ಒಳಗೊಂಡಿತ್ತು.
ಮುಂದಿನ 10 ವರ್ಷಗಳಲ್ಲಿ ತಾವು ವಾಸವಾಗಿರುವ ಸ್ಥಳದಲ್ಲಿ ಹವಾಮಾನ ಬದಲಾವಣೆಯು ಗಂಭೀರ ಪರಿಣಾಮವನ್ನುಂಟು ಮಾಡಲಿದೆ ಎಂದು ಭಾರತದಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.66ರಷ್ಟು ಜನರು ನಿರೀಕ್ಷಿಸಿದ್ದಾರೆ.
ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿ ತಮಗೆ ನೆರವಾಗಲು ತಮ್ಮ ಸರಕಾರ ಮತ್ತು ಉದ್ಯಮಗಳು ಒದಗಿಸಿರುವ ಮಾಹಿತಿಗಳು ಸಾಕಷ್ಟು ಪ್ರಮಾಣದಲ್ಲಿಯೇ ಎಂಬ ಬಗ್ಗೆ ಭಾರತೀಯರಲ್ಲಿ ಭಿನ್ನ ಅಭಿಪ್ರಾಯಗಳಿರುವುದು ಗಮನಾರ್ಹವಾಗಿದೆ ಎಂದು ವರದಿಯು ಹೇಳಿದೆ.
ಶೇ.37ರಷ್ಟು ಜನರು ತಮಗೆ ಒದಗಿಸಲಾಗಿರುವ ಮಾಹಿತಿಗಳಲ್ಲಿ ಕೊರತೆಗಳಿವೆ ಎಂದು ಹೇಳಿದರೆ,ಶೇ.29ರಷ್ಟು ಜನರು ಸಾಕಷ್ಟು ಪ್ರಮಾಣದಲ್ಲಿ ಮಾಹಿತಿಗಳನ್ನು ಒದಗಿಸಲಾಗಿದೆ ಎಂದು ಹೇಳಿದ್ದಾರೆ. ಶೇ.34ರಷ್ಟು ಜನರು ಅತಿಯಾದ ಮಾಹಿತಿಗಳನ್ನು ಒದಗಿಸಲಾಗಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಹವಾಮಾನ ಬದಲಾವಣೆಯ ವರದಿಗಾರಿಕೆಯ ಕುರಿತೂ ಭಾರತೀಯರು ವಿಭಿನ್ನ ಗ್ರಹಿಕೆಗಳನ್ನು ಹೊಂದಿದ್ದಾರೆ. ಶೇ.37ರಷ್ಟು ಜನರು ಮಾಧ್ಯಮಗಳು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಉತ್ಪ್ರೇಕ್ಷಿಸುತ್ತಿವೆ ಎಂದು ಹೇಳಿದರೆ,ಶೇ.32ರಷ್ಟು ಜನರು ಪರಿಣಾಮಗಳನ್ನು ಕೀಳಂದಾಜಿಸಲಾಗಿದೆ ಎಂದಿದ್ದಾರೆ. ಶೇ.18ರಷ್ಟು ಜನರು ಭಾರತೀಯ ಮಾಧ್ಯಮಗಳು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಸಮಂಜಸವಾಗಿ ಬಿಂಬಿಸುತ್ತಿವೆ ಎಂದು ಹೇಳಿದ್ದಾರೆ.
ಹವಾಮಾನ ಬದಲಾವಣೆಯನ್ನು ಎದುರಿಸಲು ಭಾರತ ಸರಕಾರವು ಕಠಿಣವಾಗಿ ಶ್ರಮಿಸುತ್ತಿದೆ ಎಂದು ಶೇ.63ರಷ್ಟು ಜನರು ಹೇಳಿದರೆ,ಶೇ.26ರಷ್ಟು ಜನರು ಸರಕಾರವು ಅಷ್ಟೊಂದು ಕಠಿಣ ಶ್ರಮವನ್ನು ವಹಿಸುತ್ತಿಲ್ಲ ಅಥವಾ ಶ್ರಮಿಸುತ್ತಲೇ ಇಲ್ಲ ಎಂದು ಹೇಳಿದ್ದಾರೆ.
ಹವಾಮಾನ ಬದಲಾವಣೆ ಕುರಿತು ವಿಶ್ವಸಂಸ್ಥೆಯ ಶೃಂಗಸಭೆಯು ದುಬೈನಲ್ಲಿ ನಡೆಯುತ್ತಿರುವಾಗಲೇ ಇಪ್ಸೋಸ್ ವರದಿ ಹೊರಬಿದ್ದಿದೆ.