6 ದಿನಗಳು ಮುಂಚಿತವಾಗಿ ಸಂಪೂರ್ಣ ದೇಶವನ್ನು ಆವರಿಸಿದ ನೈಋತ್ಯ ಮುಂಗಾರು
ಹೊಸದಿಲ್ಲಿ : ನೈಋತ್ಯ ಮುಂಗಾರು ವಾಡಿಕೆಯ ದಿನಾಂಕಕ್ಕಿಂತ 6 ದಿನಗಳು ಮುಂಚಿತವಾಗಿ ರವಿವಾರ ಸಂಪೂರ್ಣ ದೇಶವನ್ನು ಆವರಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ರಾಜಸ್ಥಾನ ಪಂಜಾಬ್ ಹಾಗೂ ಹರ್ಯಾಣದ ಉಳಿದ ಭಾಗಗಳಲ್ಲಿ ನೈಋತ್ಯ ಮುಂಗಾರು ಮಳೆ ಮುಂದುವರಿದಿದೆ ಎಂದು ಅದು ತಿಳಿಸಿದೆ. ನೈಋತ್ಯ ಮುಂಗಾರು ಸಾಮಾನ್ಯವಾಗಿ ಜುಲೈ 8ರಂದು ಸಂಪೂರ್ಣ ದೇಶವನ್ನು ಆವರಿಸುತ್ತದೆ. ಅದರೆ ಈ ಬಾರಿ ಜುಲೈ 2ರಂದೇ ಸಂಪೂರ್ಣ ದೇಶವನ್ನು ಆವರಿಸಿದೆ ಎಂದು ಅದು ಹೇಳಿದೆ.
ಜೂನ್ನಲ್ಲಿ 16ಕ್ಕಿಂತಲೂ ಅಧಿಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕಡಿಮೆ ಮಳೆ ಸ್ವೀಕರಿಸಿವೆ. ಬಿಹಾರ್ ಹಾಗೂ ಕೇರಳದಲ್ಲಿ ಅನುಕ್ರಮವಾಗಿ ಶೇ. 69 ಹಾಗೂ ಶೇ. 60ರಷ್ಟು ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವುದು ವರದಿಯಾಗಿದೆ. ಉತ್ತರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಜಾರ್ಖಂಡ್, ಆಂಧ್ರಪ್ರದೇಶ ಹಾಗೂ ತೆಲಂಗಾಣದಂತಹ ಇತರ ರಾಜ್ಯಗಳು ನೈಋತ್ಯ ಮುಂಗಾರು ಋತುವಿನ ಮೊದಲ ತಿಂಗಳಾದ ಜೂನ್ನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ಸ್ವೀಕರಿಸಿದೆ.
2023 ಜುಲೈಯಲ್ಲಿ ದೇಶಾದ್ಯಂತ ಒಟ್ಟಾರೆಯಾಗಿ ಸರಾಸರಿ ಮಾಸಿಕ ಮಳೆ ಸಾಮಾನ್ಯವಾಗಿರಲಿದೆ (ಎಲ್ಪಿಎಯ ಶೇ. 94ರಿಂದ 106). ಇದು ಸಾಮಾನ್ಯಕ್ಕಿಂತ ಧನಾತ್ಮಕವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ತಿಳಿಸಿದ್ದಾರೆ. 1971-2020ರ ದತ್ತಾಂಶದ ಆಧಾರದಲ್ಲಿ ಜುಲೈಯಲ್ಲಿ ದೇಶಾದ್ಯಂತ ದೀರ್ಘಾವಧಿಯ ಸರಾಸರಿ (ಎಲ್ಪಿಎ)ಸುಮಾರು 280.4 ಮಿ.ಮೀ. ಆಗಿದೆ ಎಂದು ಅವರು ತಿಳಿಸಿದ್ದಾರೆ.