ಒಡಿಶಾದಲ್ಲಿ ಬಿಸಿಲ ಹೊಡೆತಕ್ಕೆ ಮತ್ತೆ 67 ಮಂದಿ ಮೃತ್ಯು: ದೇಶಾದ್ಯಂತ 165 ಬಲಿ

Update: 2024-06-02 03:18 GMT

ಭುವನೇಶ್ವರ: ಒಡಿಶಾದಲ್ಲಿ ಕಳೆದ 48 ಗಂಟೆಗಳಲ್ಲಿ ತಾಪಮಾನ ಮಟ್ಟ ಗಣನೀಯವಾಗಿ ಏರಿದ್ದು, ಬಿಸಿಲ ಝಳದಿಂದ 67 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಬಲಂಗೀರ್ ಜಿಲ್ಲೆಯೊಂದರಲ್ಲೇ 20 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 72 ಗಂಟೆಗಳ ಅವಧಿಯಲ್ಲಿ ಒಟ್ಟು 96 ಮಂದಿ ಬಲಿಯಾಗಿದ್ದಾರೆ. ಇದುವರೆಗೆ ಒಡಿಶಾ ಸರ್ಕಾರ 15 ಸಾವುಗಳು ಬಿಸಿಲ ಝಳದಿಂದ ಸಂಭವಿಸಿವೆ ಎಂದು ದೃಢಪಡಿಸಿದ್ದು, ಉಳಿದ 81 ಪ್ರಕರಣಗಳಲ್ಲಿ ಅಟಾಪ್ಸಿ ವರದಿಗಳು ಬಾಕಿ ಇವೆ.

ಶನಿವಾರ ಛತ್ತೀಸ್ಗಢದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. ಏತನ್ಮಧ್ಯೆ ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯಲ್ಲಿ ಮೇ 28ರಂದು ದನಗಾಹಿಯೊಬ್ಬ ಮೃತಪಟ್ಟಿದ್ದು, ಈತ ಮೃತಪಟ್ಟಿರುವುದು ಬಿಸಿಲ ಹೊಡೆತಕ್ಕೆ ಎನ್ನುವುದು ದೃಢಪಟ್ಟಿದೆ. ಪ್ರಸಕ್ತ ಬೇಸಿಗೆಯಲ್ಲಿ ದೇಶಾದ್ಯಂತ ಬಿಸಿಲ ಝಳದಿಂದ ಮೃತಪಟ್ಟವರ ಸಂಖ್ಯೆ 165ಕ್ಕೇರಿದೆ. ದೆಹಲಿಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, ಶನಿವಾರ ಒಂದೇ ದಿನ ದೇಶಾದ್ಯಂತ 77 ಮಂದಿ ಬಲಿಯಾದಂತಾಗಿದೆ.

ಒಡಿಶಾದಲ್ಲಿ ಶನಿವಾರ ಮೃತಪಟ್ಟವರಲ್ಲಿ ಜಾಜ್ಪುರ ಜಿಲ್ಲೆ ಬಿಂಝಾರ್ಪುರ ಬ್ಲಾಕ್ನ ಬೂತ್ ಮಟ್ಟದ ಅಧಿಕಾರಿ ಸೇರಿದ್ದಾರೆ. ಇವರು ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟರು. ಬಲಸೋರ್ ಜಿಲ್ಲೆಯ ನೀಲಗಿರಿಯಲ್ಲಿ ವೃದ್ಧ ಮತದಾರರೊಬ್ಬರು ಮತದಾನಕ್ಕೆ ಬಂದ ವೇಳೆ ಮೃತಪಟ್ಟಿದ್ದಾರೆ. ಸಂಬಲ್ಪುರ ಜಿಲ್ಲೆಯಲ್ಲಿ 15 ಮಂದಿ ಜೀವ ಕಳೆದುಕೊಂಡಿದ್ದಾರೆ. ಪಶ್ಚಿಮ ಒಡಿಶಾದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಒಟ್ಟು 30 ಸಾವುಗಳು ಸಂಭವಿಸಿವೆ.

ಇದೇ ಪರಿಸ್ಥಿತಿ ಮುಂದಿನ ಕೆಲ ದಿನಗಳು ಮುಂದುವರಿಯಲಿದ್ದು, ಆ ಬಳಿಕ ಕ್ರಮೇಣ ಬಿಸಿಲ ಝಳ ಇಳಿಯಲಿದೆ ಎಂಧು ಹವಾಮಾನ ಇಲಾಖೆ ಅಂದಾಜಿಸಿದೆ. ಶನಿವಾರ ತಿತ್ಲಿಗಢದಲ್ಲಿ ಗರಿಷ್ಠ 46 ಡಿಗ್ರಿ, ಬಲಂಗೀರ್ನಲ್ಲಿ 45.5 ಡಿಗ್ರಿ, ಭವಾನಿಪಟ್ಣದಲ್ಲಿ 44.6 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News