ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನದ ಭರವಸೆ ಬಿಜೆಪಿ ಈಡೇರಿಸಲಿದೆ: ಪ್ರಧಾನಿ ಮೋದಿ

Update: 2024-09-19 12:11 GMT

 ಪ್ರಧಾನಿ ನರೇಂದ್ರ ಮೋದಿ (Photo: PTI)

ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವ ಭರವಸೆಯನ್ನು ಬಿಜೆಪಿ ಈಡೇರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ರೀನಗರದಲ್ಲಿ ಹೇಳಿದ್ದಾರೆ.

ಶ್ರೀನಗರದ ಶೇರ್-ಎ-ಕಾಶ್ಮೀರ ಸ್ಟೇಡಿಯಂನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಜಮ್ಮು- ಕಾಶ್ಮೀರದ ಯುವಕರು ಪ್ರಜಾಪ್ರಭುತ್ವದಲ್ಲಿ ಮತ್ತೆ ವಿಶ್ವಾಸವನ್ನು ಕಂಡುಕೊಂಡಿದ್ದಾರೆ. ತಮ್ಮ ಮತವು ಬದಲಾವಣೆಯನ್ನು ತರಬಹುದು ಎಂದು ಅವರು ಭಾವಿಸುತ್ತಿದ್ದಾರೆ. ಇದು ಸಬಲೀಕರಣದ ಮೊದಲ ಹೆಜ್ಜೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನನ್ನ ಜಮ್ಮು ಮತ್ತು ಕಾಶ್ಮೀರದ ಯುವಕರು ಇನ್ನು ಅಸಹಾಯಕರಲ್ಲ, ಅವರು ಮೋದಿ ಸರ್ಕಾರದಲ್ಲಿ ಸಬಲೀಕರಣಗೊಳ್ಳುತ್ತಿದ್ದಾರೆ. ಜಮ್ಮು-ಕಾಶ್ಮೀರ ಬಿಜೆಪಿ ಘಟಕ ಯುವಕರಿಗೆ ಉದ್ಯೋಗದ ಭರವಸೆ ನೀಡಿರುವುದು ನನಗೆ ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಈ ಮೂರು ಪಕ್ಷಗಳು ತಮ್ಮ ಲಾಭಕ್ಕಾಗಿ ಪ್ರಜಾಪ್ರಭುತ್ವ ಮತ್ತು ಕಾಶ್ಮೀರವನ್ನು ತುಳಿದು ಹಾಕಿವೆ. 1980ರ ದಶಕದಲ್ಲಿ ಅವರು ಮಾಡಿದ್ದೇನು ಎಂಬುದು ನಿಮಗೆ ನೆನಪಿದೆಯೇ? ಅವರು ಜಮ್ಮು ಮತ್ತು ಕಾಶ್ಮೀರದ ರಾಜಕೀಯವನ್ನು ತಮ್ಮ ಸ್ವಂತ ದುರಾಸೆಗೆ ಬಳಸಿಕೊಂಡರು, ಅವರಿಗೆ ತಮ್ಮ ಕುಟುಂಬಸ್ಥರನ್ನು ಬಿಟ್ಟು ಬೇರೆ ಯಾರೂ ಮುಂದಕ್ಕೆ ಬರುವುದು ಬೇಕಿರಲಿಲ್ಲ. ಅವರು ಪಂಚಾಯತ್, ಡಿಡಿಸಿ ಮತ್ತು ಬಿಡಿಸಿ ಚುನಾವಣೆಗಳನ್ನು ಏಕೆ ನಿಲ್ಲಿಸಿದ್ದಾರೆ ಎಂದು ಮೋದಿ ಪ್ರಶ್ನಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯು ಸಾಕಷ್ಟು ಬದಲಾಗಿದೆ, ಇದು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಯುವಕರ ವಿಶ್ವಾಸವನ್ನು ಮರಳಿ ಮೂಡಿಸಿದೆ. ಮೊದಲು ಚುನಾವಣೆ ನಡೆದ ಸಂದರ್ಭಗಳನ್ನು ನೆನಪಿಸಿಕೊಳ್ಳಿ. ಸಂಜೆ 6 ಗಂಟೆಗೆ ಪ್ರಚಾರಗಳು ನಿಲ್ಲುತ್ತವೆ. ಮನೆ-ಮನೆ ಪ್ರಚಾರ ಅಸಾಧ್ಯವಾಗಿತ್ತು. ಕಾಂಗ್ರೆಸ್, ಎನ್ಸಿ ಮತ್ತು ಪಿಡಿಪಿ ಈ ಮೂರು ಕುಟುಂಬಗಳು ಇದರಿಂದ ಸಂತೋಷವಾಗಿದ್ದವು. ಇಂದು, ತಡರಾತ್ರಿವರೆಗೂ ಪ್ರಚಾರ ನಡೆಯುತ್ತದೆ. ಈಗ ಜನರು ಪ್ರಜಾಪ್ರಭುತ್ವವನ್ನು ಸಂಭ್ರಮಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯುವಕರು ವಿಶ್ವಾಸವನ್ನು ಕಂಡುಕೊಂಡಿದ್ದಾರೆ. ಅವರು ತಮ್ಮ ಮತ ಬದಲಾವಣೆಯನ್ನು ತರಬಹುದು ಎಂದು ಭಾವಿಸುತ್ತಿದ್ದಾರೆ. ಇದು ಸಬಲೀಕರಣದ ಮೊದಲ ಹೆಜ್ಜೆಯಾಗಿದೆ ಎಂದು ಮೋದಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News