ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ |ರಾಜ್ಯ ಸ್ಥಾನಮಾನ, ಸಬಲೀಕರಣ, ಅಭಿವೃದ್ಧಿ : ಪ್ರಧಾನಿ ಮೋದಿ ಭರವಸೆ

Update: 2024-09-19 15:29 GMT

ನರೇಂದ್ರ ಮೋದಿ | PC ; PTI 

ಶ್ರೀನಗರ : ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಮೊದಲ ದಿನದ ಮತದಾನ ಅಂಕಿ ಅಂಶಗಳನ್ನು ಗುರುವಾರ ಇಲ್ಲಿ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿಯವರು,ಇದು ಪ್ರಜಾಪ್ರಭುತ್ವದ ಮೇಲಿನ ಅಪಾರ ವಿಶ್ವಾಸವನ್ನು ತೋರಿಸಿದೆ. ತಮ್ಮ ಮತವು ಬದಲಾವಣೆಯನ್ನು ತರಬಹುದು ಎಂದು ಯುವಜನರು ಭಾವಿಸಿದ್ದಾರೆ ಮತ್ತು ಇದು ಅವರ ಸಬಲೀಕರಣದತ್ತ ಮೊದಲ ಹೆಜ್ಜೆಯಾಗಿದೆ ಎಂದರು.

ಕಾಶ್ಮೀರ ಕಣಿವೆಯಲ್ಲಿ ದಶಕಗಳ ಕಾಲ ಭಯೋತ್ಪಾದನೆ ಹಾಗು ಕಾಶ್ಮೀರಿ ಪಂಡಿತರ ಮತ್ತು ಸಿಕ್ಖರು ಸೇರಿದಂತೆ ಅಲ್ಪಸಂಖ್ಯಾತರಿಗೆ ಎಸಗಲಾದ ಅನ್ಯಾಯಗಳಿಗೆ ಕಣಿವೆಯ ಎರಡು ದೊಡ್ಡ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಜೊತೆಗೆ ಕಾಂಗ್ರೆಸ್‌ನ ವಂಶ ಪಾರಂಪರ್ಯ ರಾಜಕೀಯವನ್ನು ಮೋದಿ ದೂಷಿಸಿದರು.

ಶ್ರೀನಗರದ ಶೇರ್-ಎ-ಕಾಶ್ಮೀರ್ ಸ್ಟೇಡಿಯಮ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳ ಬೆಂಬಲಾರ್ಥ ರ್ಯಾಲಿಯಲ್ಲಿ ಮಾತನಾಡಿದ ಅವರು,ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವ ಭರವಸೆಯನ್ನು ಬಿಜೆಪಿ ಈಡೇರಿಸಲಿದೆ ಎಂದರು.

ರೈತರಿಗೆ ವಾರ್ಷಿಕ 10,000 ರೂ.ಗಳ ನೆರವು,ಪ್ರತಿ ಕುಟುಂಬದ ಯಜಮಾನಿಗೆ 18,000 ರೂ.ಗಳ ವಾರ್ಷಿಕ ನೆರವು,ಆರೋಗ್ಯ ವಿಮೆ ರಕ್ಷಣೆಯನ್ನು ಈಗಿನ ಐದು ಲಕ್ಷ ರೂ.ಗಳಿಂದ ಏಳು ಲಕ್ಷ ರೂ.ಗಳಿಗೆ ಹೆಚ್ಚಿಸುವುದು ಇವು ಪ್ರಧಾನಿಯವರ ಇತರ ಭರವಸೆಗಳಲ್ಲಿ ಸೇರಿವೆ.

ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ತಮ್ಮ ಸ್ವಂತ ಲಾಭಗಳಿಗಾಗಿ ಪ್ರಜಾಪ್ರಭುತ್ವ ಮತ್ತು ಕಾಶ್ಮೀರಿಯತ್ ಅನ್ನು ತುಳಿದಿವೆ. 1980ರ ದಶಕದಲ್ಲಿ ಜಮ್ಮು-ಕಾಶ್ಮೀರ ರಾಜಕೀಯವನ್ನು ತಮ್ಮ ಜಹಗೀರು ಎಂದು ಅವು ಪರಿಗಣಿಸಿದ್ದವು. ತಮ್ಮ ಕುಟುಂಬದವರನ್ನು ಹೊರತುಪಡಿಸಿ ಇತರ ಯಾರೂ ಮುಂದೆ ಬರುವುದನ್ನು ಅವು ಬಯಸಿರಲಿಲ್ಲ,ಇಲ್ಲದಿದ್ದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಅವು ಏಕೆ ನಿಲ್ಲಿಸುತ್ತಿದ್ದವು? ಅದು ತಮ್ಮ ಕುಟುಂಬ ಆಡಳಿತಕ್ಕೆ ಸವಾಲು ಹಾಕುವ ಹೊಸಮುಖಗಳನ್ನು ಮುಂದಕ್ಕೆ ತರುತ್ತದೆ ಎನ್ನುವುದು ಅವುಗಳಿಗೆ ತಿಳಿದಿತ್ತು. ಪರಿಣಾಮವಾಗಿ ಯುವಜನರು ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಕಳೆದುಕೊಳ್ಳತೊಡಗಿದ್ದರು ಎಂದರು.

ಕಳೆದ ಐದು ವರ್ಷಗಳಲ್ಲಿ ಪರಿಸ್ಥಿತಿಯಲ್ಲಿ ವ್ಯಾಪಕ ಬದಲಾವಣೆಗಳಾಗಿವೆ. ಹಿಂದೆ ಚುನಾವಣಾ ಪ್ರಚಾರಗಳು ಸಂಜೆ ಆರು ಗಂಟೆಗೆ ಅಂತ್ಯಗೊಳ್ಳುತ್ತಿದ್ದವು,ಮನೆಮನೆಗೆ ತೆರಳಿ ಪ್ರಚಾರ ಅಸಾಧ್ಯವಾಗಿತ್ತು, ಇಂದು ತಡರಾತ್ರಿಯಲ್ಲಿಯೂ ಚುನಾವಣಾ ಪ್ರಚಾರ ನಡೆಯುತ್ತಿದೆ. ಈಗ ಜನರು ಪ್ರಜಾಪ್ರಭುತ್ವವನ್ನು ಸಂಭ್ರಮಿಸುತ್ತಿದ್ದಾರೆ ಎಂದರು

ಜಮ್ಮು-ಕಾಶ್ಮೀರದಲ್ಲಿ ಸೆ.26ರಂದು ಎರಡನೇ ಮತ್ತು ಅ.1ರಂದು ಮೂರನೇ ಹಂತದ ಮತದಾನ ನಡೆಯಲಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News