ಗುರುಗ್ರಾಮ್ | ಮಾಜಿ ಪೋಲಿಸ್ ಆಯುಕ್ತರಿಂದ ನ್ಯಾಯಾಧೀಶರ ವಿರುದ್ಧ ಮಾನನಷ್ಟ ಮೊಕದ್ದಮೆ

Update: 2024-09-19 16:30 GMT

   ಸಾಂದರ್ಭಿಕ ಚಿತ್ರ

ಗುರುಗ್ರಾಮ್ : ಮಾಜಿ ಗುರುಗ್ರಾಮ್ ಪೋಲಿಸ್ ಆಯುಕ್ತ ಕೃಷ್ಣಕುಮಾರ ರಾವ್ ಅವರು ನ್ಯಾಯಾಂಗ ಆದೇಶದಲ್ಲಿ ತನ್ನ ವಿರುದ್ಧ ‘ಪ್ರತಿಕೂಲ ಹೇಳಿಕೆಗಳಿಗಾಗಿ’ ಒಂದು ಕೋಟಿ ರೂ.ಪರಿಹಾರವನ್ನು ಕೋರಿ ನ್ಯಾಯಾಧೀಶರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.

ಸೋಮವಾರ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ವಿಕ್ರಮಜಿತ್ ಸಿಂಗ್ ಅವರ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ದಾಖಲಿಸಲಾಗಿದ್ದು, ಅದೇ ದಿನ ವಿಚಾರಣೆ ನಡೆಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ನ.21ಕ್ಕೆ ನಿಗದಿಗೊಳಿಸಿದೆ.

ಬಹುಕೋಟಿ ರೂ.ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪೋಲಿಸ್ ಉಪ ಆಯುಕ್ತ ಧೀರಜ್ ಸೇಟಿಯಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತನ್ನ ಫೆಬ್ರವರಿ 2022ರ ಆದೇಶದಲ್ಲಿ ತಿರಸ್ಕರಿಸಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಮಿತ್ ಸಹ್ರಾವತ್ ಅವರು, ಪ್ರಕರಣ ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚು ನಿಗೂಢವಾಗಿದೆ ಎಂದು ಹೇಳಿದ್ದರು.

ಪ್ರಮುಖ ಶಂಕಿತ, ವೈದ್ಯ ಸಚಿಂದರ್ ಜೈನ್ ನವಲ್ ನೀಡಿರುವ ಹೇಳಿಕೆಯ ಆಧಾರದಲ್ಲಿ ಪ್ರಕರಣದಲ್ಲಿ ತನಿಖೆಯನ್ನು ಹಳಿ ತಪ್ಪಿಸಲು ಲಂಚವನ್ನು ಸ್ವೀಕರಿಸಿರುವ ಆರೋಪಿ ಸೇಟಿಯಾ ರಾವ್ ಅವರ ನೇತೃತ್ವದಡಿಯೇ ಹೀಗೆ ಮಾಡಿರುವ ಶಂಕೆ ಮೂಡಿದೆ. ಏಕೆಂದರೆ ಗ್ಯಾಂಗ್‌ಸ್ಟರ್‌ಗಳು ಅವರನ್ನು ಕಮಿಷನರ್ ಕಚೇರಿಯಲ್ಲಿ ಭೇಟಿಯಾಗುತ್ತಿದ್ದರು ಎಂದು ನ್ಯಾ.ಸಹ್ರಾವತ್ ತನ್ನ ಆದೇಶದಲ್ಲಿ ಹೇಳಿದ್ದರು.

ಮಾಜಿ ಪೋಲಿಸ್ ಆಯುಕ್ತರ ಅನುಮತಿಯೊಂದಿಗೆ ಶಂಕಿತನ್ನು ಕಸ್ಟಡಿಗೆ ತೆಗೆದುಕೊಳ್ಳದೆ ಇಡೀ ಪ್ರಕ್ರಿಯೆಯನ್ನು ನಡೆಸಲಾಗಿತ್ತೇ ಎನ್ನುವುದನ್ನು ನಿರ್ಧರಿಸಲು ತನಿಖಾಧಿಕಾರಿಗಳಿಗೆ ಸಾಧ್ಯವಾಗಿಲ್ಲ ಎಂದೂ ನ್ಯಾಯಾಲಯವು ಹೇಳಿತ್ತು.

ನ್ಯಾಯಾಧೀಶರ ಹೇಳಿಕೆಗಳನ್ನು ಊಹೆಗಳಿಂದ ಮಾಡಲಾಗಿದ್ದು, ಅದಕ್ಕೆ ಯಾವುದೇ ನ್ಯಾಯಾಂಗ ಆಧಾರವಿಲ್ಲ ಎಂದು ಮಾನನಷ್ಟ ಮೊಕದ್ದಮೆಯಲ್ಲಿ ವಾದಿಸಿರುವ ರಾವ್, ಘಟನಾವಳಿಗಳ ಬಗ್ಗೆ ತನ್ನ ಜ್ಞಾನದ ಕೊರತೆಯ ಕುರಿತು ನ್ಯಾಯಾಧೀಶರ ಟೀಕೆಗಳು ಸ್ವರೂಪದಲ್ಲಿ ವೈಯಕ್ತಿಕವಾಗಿದ್ದವು ಮತ್ತು ಜಾಮೀನು ಅರ್ಜಿಯ ತೀರ್ಪಿಗೆ ಸಂಬಂಧಿಸಿರಲಿಲ್ಲ ಎಂದು ಹೇಳಿದ್ದಾರೆ.

ಘಟನೆಯು ಆ.4, 2021ರಷ್ಟು ಹಿಂದಿನದಾಗಿದೆ. ಖಾಸಗಿ ಕಂಪನಿಯೊಂದು ತನ್ನ ಕಚೇರಿಯನ್ನಾಗಿ ಬಳಸುತ್ತಿದ್ದ ಫ್ಲ್ಯಾಟೊಂದಕ್ಕೆ ನುಗ್ಗಿದ್ದ ಗ್ಯಾಂಗಸ್ಟರ್ ಲಗನಪುರಿಯಾನ ಜನರು ಕೋಟ್ಯಂತರ ರೂಪಾಯಿಗಳನ್ನು ದೋಚಿದ್ದರು. 30-40 ಕೋಟಿ ರೂ.ಗಳಷ್ಟು ಹಣವನ್ನು ದೋಚಲಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ಕಾರ್ಯಪಡೆಯು ಅಂದಾಜಿಸಿತ್ತು.

ಪ್ರಕರಣವನ್ನು ಮುಚ್ಚಿ ಹಾಕಲು ತಾನು ಸೇಟಿಯಾಗೆ ಚಿನ್ನ,ನಗದು ಮತ್ತು 2.5 ಕೋಟಿ ಮೌಲ್ಯದ ಅಮೆರಿಕನ್ ಡಾಲರ್‌ಗಳನ್ನು ಲಂಚವಾಗಿ ನೀಡಿದ್ದಾಗಿ ನವಲ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದ.

ಆದರೆ ಹೆಚ್ಚಿನ ಚಿನ್ನ ಮತ್ತು ಹಣವನ್ನು ಮರಳಿಸಿ ಕೆಲವೇ ಡಾಲರ್‌ಗಳನ್ನು ಉಳಿಸಿಕೊಂಡಿದ್ದ ಸೇಟಿಯಾ ಪ್ರಕರಣ ತನ್ನ ಕೈಗಳಲ್ಲಿ ಇಲ್ಲ ಎಂದು ತಿಳಿಸಿದ್ದರು ಎಂದೂ ಆತ ಹೇಳಿದ್ದ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News