ಓಲಾ ಎಲೆಕ್ಟ್ರಿಕ್ ವಿರುದ್ಧ ಕೇಂದ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದಿಂದ ತನಿಖೆ
ಹೊಸದಿಲ್ಲಿ: ಓಲಾ ಎಲೆಕ್ಟ್ರಿಕ್‌ನ ಸೇವೆ ಮತ್ತು ಉತ್ಪನ್ನಗಳಲ್ಲಿನ ಲೋಪಗಳಿಗೆ ಸಂಬಂಧಿಸಿದ ದೂರುಗಳ ಕುರಿತು ವಿವರವಾದ ತನಿಖೆಗೆ ಕೇಂದ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಆದೇಶಿಸಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಸಿಸಿಪಿಎ ಈ ಬಗ್ಗೆ ತನಿಖೆ ನಡೆಸುವಂತೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನ ಮಹಾನಿರ್ದೇಶಕರಿಗೆ ಸೂಚಿಸಿದೆ. ನವೆಂಬರ್ 6 ರಂದು ಈ ಕುರಿತು ಆದೇಶ ಹೊರಡಿಸಲಾಗಿದ್ದು, 15 ದಿನಗಳಲ್ಲಿ ತನಿಖಾ ವರದಿಯನ್ನು ಸಲ್ಲಿಸುವಂತೆ ಡಿಜಿಗೆ ತಿಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
"ಓಲಾ ಎಲೆಕ್ಟ್ರಿಕ್‌ನಿಂದ ಸೇವೆಗಳು ಮತ್ತು ಉತ್ಪನ್ನಗಳಲ್ಲಿನ ಕೊರತೆಗಳ ದೂರುಗಳ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಲಾಗಿದೆ" ಎಂದು ಸಿಸಿಪಿಎ ಉನ್ನತಾಧಿಕಾರಿ ನಿಧಿ ಖರೆ ಅವರು ತಿಳಿಸಿದ್ದಾರೆ.
“ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH)ಯಲ್ಲಿ ಸ್ವೀಕರಿಸಿದ ದೂರುಗಳನ್ನು ಪರಿಶೀಲಿಸಿದ ಬಳಿಕ, CCPA ಕ್ರಮವನ್ನು ಪ್ರಾರಂಭಿಸಿದೆ. ಒಲಾ ಎಲೆಕ್ಟ್ರಿಕ್ ವಿರುದ್ಧ ಸೆಪ್ಟೆಂಬರ್ 1, 2023 ರಿಂದ ಆಗಸ್ಟ್ 31, 2024 ರವರೆಗಿನ ಒಂದು ವರ್ಷದಲ್ಲಿ 10,644 ದೂರುಗಳನ್ನು ಸ್ವೀಕರಿಸಲಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ,
ಕಂಪನಿಗೆ ಈ ಹಿಂದೆ ಸಿಪಿಎ ನೋಟಿಸ್ ನೀಡಿದ್ದು, ಅಕ್ಟೋಬರ್ 21 ರಂದು ನೋಟಿಸ್‌ಗೆ ಉತ್ತರಿಸಿದ ಕಂಪನಿಯು 99.1 ರಷ್ಟು ದೂರುಗಳನ್ನು ಪರಿಹರಿಸಿದೆ ಎಂದು ಹೇಳಿದೆ. ಆದಾಗ್ಯೂ, ಅನೇಕ ಗ್ರಾಹಕರ ಕುಂದುಕೊರತೆಗ ಬಗ್ಗೆ ಕಂಪನಿಯು ಇನ್ನೂ ತಿಳಿಸಿಲ್ಲ ಎಂದು ಸಿಪಿಎ ಕಂಡುಹಿಡಿದಿದೆ.