ಟ್ರಕ್ ಗೆ ಢಿಕ್ಕಿ ಹೊಡೆದ ಮಿನಿ ಬಸ್: ಒಂದೇ ಕುಟುಂಬದ ಏಳು ಮಂದಿ ಮೃತ್ಯು

Update: 2024-05-24 06:09 GMT

Photo: NDTV

ಹೊಸದಿಲ್ಲಿ: ಮಿನಿ ಬಸ್ ಒಂದು ಟ್ರಕ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ, ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟು, 20 ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ದಿಲ್ಲಿ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಅಪಘಾತಕ್ಕೊಳಗಾದ ಮಿನಿ ಬಸ್ ಒಂದೇ ಕುಟುಂಬದ 30ಕ್ಕೂ ಹೆಚ್ಚು ಮಂದಿಯನ್ನು ಜಮ್ಮುವಿನ ವೈಷ್ಣೋ ದೇವಿಗೆ ತೀರ್ಥಯಾತ್ರೆಗೆಂದು ಕರೆದೊಯ್ಯುತ್ತಿತ್ತು ಎಂದು ಹೇಳಲಾಗಿದೆ.

ಉತ್ತರ ಪ್ರದೇಶದ ಬುಲಂದ್ ಶಹರ್ ನ ಕುಟುಂಬವನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್, ಅಂಬಾಲಾ ಬಳಿ ಟ್ರಕ್ ನೊಂದಿಗೆ ಢಿಕ್ಕಿಯಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಮುಂದೆ ಚಲಿಸುತ್ತಿದ್ದ ಟ್ರಕ್ ನ ಚಾಲಕ ದಿಢೀರೆಂದು ಬ್ರೇಕ್ ಹಾಕಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಈ ವೇಳೆ, ಬಸ್ ಅನ್ನು ನಿಯಂತ್ರಿಸಲು ಮಿನಿ ಬಸ್ ಚಾಲಕ ವಿಫಲವಾಗಿದ್ದರಿಂದ, ಟ್ರಕ್ ನ ಹಿಂಬದಿಗೆ ಮಿನಿ ಬಸ್ ಢಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

ಢಿಕ್ಕಿಯ ತೀವ್ರತೆಗೆ ಮಿನಿ ಬಸ್ ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿರುವುದು ಅಪಘಾತದ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ.

ಈ ಅಪಘಾತದಲ್ಲಿ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ 20ಕ್ಕೂ ಹೆಚ್ಚು ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳದಿಂದ ಟ್ರಕ್ ಚಾಲಕ ಪರಾರಿಯಾಗಿದ್ದು, ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News