ವೈದ್ಯರು ಜೆನೆರಿಕ್ ಔಷಧ ಮಾತ್ರ ಶಿಫಾರಸು ಮಾಡಬೇಕು ಎಂಬ ಆದೇಶಕ್ಕೆ ತಡೆ
ಹೊಸದಿಲ್ಲಿ: ವೈದ್ಯರು ಜೆನೆರಿಕ್ ಔಷಧಿಯನ್ನಲ್ಲದೆ ಮತ್ಯಾವ ಔಷಧವನ್ನೂ ಶಿಫಾರಸು ಮಾಡಬಾರದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗವು ಜಾರಿ ಮಾಡಿದ್ದ ಆದೇಶವನ್ನು ತಡೆ ಹಿಡಿಯಲಾಗಿದೆ. ಭಾರತೀಯ ವೈದ್ಯಕೀಯ ಒಕ್ಕೂಟ ಹಾಗೂ ಸ್ಥಾನಿಕ ವೈದ್ಯರ ಸಂಘದ ಮಹಾ ಒಕ್ಕೂಟವು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಆರೋಗ್ಯ ಸಚಿವ ಮನ್ಷುಕ್ ಮಾಂಡವಿಯಾ ಅವರನ್ನು ಭೇಟಿಯಾದ ಬೆನ್ನಿಗೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು indiatoday.in ವರದಿ ಮಾಡಿದೆ.
ವೈದ್ಯರು ಕಡ್ಡಾಯವಾಗಿ ಜೆನೆರಿಕ್ ಔಷಧ ಶಿಫಾರಸು ಮಾಡುವುದು ಸೇರಿದಂತೆ ಇನ್ನಿತರ ಮಾರ್ಗಸೂಚಿಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗದ ನೋಂದಾಯಿತ ವೈದ್ಯಕೀಯ ವೃತ್ತಿಪರರು (ವೃತ್ತಿಪರ ನಡತೆ) ನಿಬಂಧನೆಗಳು, 2023 ಬಿಡುಗಡೆಗೊಳಿಸಿತ್ತು. ಜೆನೆರಿಕ್ ಔಷಧಿಗಳು ಬ್ರ್ಯಾಂಡೆಡ್ ಔಷಧಗಳ ವೆಚ್ಚಕ್ಕಿಂತ ಶೇ. 30ರಿಂದ ಶೇ. 80ರಷ್ಟು ಕಡಿಮೆ ಇರುವುದರಿಂದ ವೈದ್ಯಕೀಯ ವೆಚ್ಚಗಳು ಕಡಿತಗೊಳ್ಳಲಿವೆ ಎಂದು ಈ ನಿಯಂತ್ರಣ ಪ್ರಾಧಿಕಾರವು ಪ್ರತಿಪಾದಿಸಿತ್ತು.
ಈ ಅಧಿಸೂಚನೆ ಜಾರಿಯಾದಾಗಿನಿಂದ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಈ ಆದೇಶವನ್ನು ವೈದ್ಯರು ವಿರೋಧಿಸುತ್ತಿದ್ದಾರೆ. ಭಾರತದಲ್ಲಿನ ಜೆನೆರಿಕ್ ಔಷಧಗಳ ಗುಣಮಟ್ಟ ನಿಯಂತ್ರಣವು ದುರ್ಬಲವಾಗಿರುವುದರಿಂದ ಇಂತಹ ನಿಯಮಗಳು ರೋಗಿಗಳನ್ನು ಅಪಾಯಕ್ಕೆ ಸಿಲುಕಿಸಲಿವೆ ಎಂದು ವೈದ್ಯರು ವಾದಿಸುತ್ತಿದ್ದಾರೆ.
ಇದಕ್ಕೂ ಮುನ್ನ, ಬ್ರ್ಯಾಂಡೆಡ್ ಔಷಧಗಳ ಹೆಸರಿಗೆ ಪರ್ಯಾಯವಾಗಿ ಜೆನೆರಿಕ್ ಔಷಧಗಳ ಹೆಸರನ್ನು ಶಿಫಾರಸು ಮಾಡದ ನೋಂದಾಯಿತ ವೈದ್ಯಕೀಯ ವೃತ್ತಿಪರರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿದೆ.