ನೀಟ್ ನಿಂದ ಹೊರಗುಳಿಯುವ ಆಯ್ಕೆ ಒದಗಿಸುವ ಖಾಸಗಿ ಮಸೂದೆಯನ್ನು ಮಂಡಿಸಿದ ಡಿಎಂಕೆ ಸಂಸದ
ಹೊಸದಿಲ್ಲಿ: ವೈದ್ಯಕೀಯ ವಿದ್ಯಾರ್ಥಿಗಳಿಗೆ ರೂಪಿಸಲಾಗಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ಹಾಗೂ ರಾಷ್ಟ್ರೀಯ ನಿರ್ಗಮನ ಪರೀಕ್ಷೆ(ನೆಕ್ಸ್ಟ್)ಯಿಂದ ರಾಜ್ಯಗಳಿಗೆ ಹೊರಗುಳಿಯುವ ಆಯ್ಕೆ ನೀಡುವ ಸಂಸತ್ ಸದಸ್ಯರ ಖಾಸಗಿ ಮಸೂದೆಯೊಂದನ್ನು ಸೋಮವಾರ (ಆಗಸ್ಟ್ 14) ಡಿಎಂಕೆ ರಾಜ್ಯಸಭಾ ಸದಸ್ಯ ಪಿ.ವಿಲ್ಸನ್ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಇದರೊಂದಿಗೆ ರಾಜ್ಯಗಳಿಗೆ ಏಕರೂಪ ಪ್ರವೇಶ ಪರೀಕ್ಷೆಯಿಂದ ಹೊರಗುಳಿಯುವ ಆಯ್ಕೆ ನೀಡುವ ದಂತ ವೈದ್ಯರು ಕಾಯ್ದೆ, 1948ಕ್ಕೆ ತಿದ್ದುಪಡಿ ಸೂಚಿಸಿರುವ ವೈದ್ಯಕೀಯ ಶಿಕ್ಷಣ ಕಾನೂನುಗಳು (ತಿದ್ದುಪಡಿ) ಮಸೂದೆ, 2021 ಎಂಬ ಶೀರ್ಷಿಕೆ ಹೊಂದಿರುವ ಮಸೂದೆಯನ್ನೂ ರಾಜ್ಯಸಭೆಯಲ್ಲಿ ಮಂಡಿಸಲಾಯಿತು ಎಂದು thenewsminute.com ವರದಿ ಮಾಡಿದೆ.
ಈ ಮಸೂದೆಯು, ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆ, 2019ರ ಸೆಕ್ಷನ್ 14(3)ರ ನಂತರ ಹೊಸ ಸೆಕ್ಷನ್ ಅನ್ನು ಸೇರ್ಪಡೆ ಮಾಡಿ, “ಒಂದು ವೇಳೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ ರಾಜ್ಯಗಳು ಒಪ್ಪಿಗೆ ಸೂಚಿಸದ ಹೊರತು ಪದವಿಪೂರ್ವ ಹಂತ ಅಥವಾ ಸ್ನಾತಕೋತ್ತರ ಪದವಿ ಅಥವಾ ಸೂಪರ್ ಸ್ಪೆಷಾಲಿಟಿ ಹಂತದಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಈ ಸೆಕ್ಷನ್ (ಸೆಕ್ಷನ್ 14(3)) ಅನ್ವಯಿಸುವುದಿಲ್ಲ” ಎಂದು ಉಲ್ಲೇಖಿಸಬೇಕು ಎಂದು ಹೇಳಿದೆ. ಇದರೊಂದಿಗೆ, ರಾಷ್ಟ್ರೀಯ ನಿರ್ಗಮನ ಪರೀಕ್ಷೆಯಿಂದ ಹೊರಗುಳಿಯಲೂ ಮತ್ತೊಂದು ಸೆಕ್ಷನ್ ಅನ್ನು ಸೇರ್ಪಡೆ ಮಾಡಬೇಕು ಎಂಬ ಪ್ರಸ್ತಾವವನ್ನು ಹೊಂದಿದೆ.
ತನ್ನ ಆಕ್ಷೇಪಗಳು ಹಾಗೂ ಕಾರಣಗಳ ಹೇಳಿಕೆಯಲ್ಲಿ ಈ ಮಸೂದೆಯು, “ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯು ಕೇವಲ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ)ಯ ವಿದ್ಯಾರ್ಥಿಗಳಿಗೆ ಮೇಲುಗೈ ಸಾಧಿಸಲು ಮಾತ್ರ ಅವಕಾಶ ನೀಡುವುದಿಲ್ಲ; ಬದಲಿಗೆ, ಸಮಾಜದ ದುರ್ಬಲ ವರ್ಗಗಳಿಗೆ ತೀವ್ರ ಸ್ವರೂಪದ ಅನನುಕೂಲವನ್ನು ಉಂಟು ಮಾಡುತ್ತದೆ” ಎಂದು ಉಲ್ಲೇಖಿಸಿದೆ.
ಈ ಪರೀಕ್ಷೆಯು ವೈದ್ಯಕೀಯ ಶಿಕ್ಷಣವನ್ನು ನಿಯಂತ್ರಿಸುವ ರಾಜ್ಯಗಳ ಹಕ್ಕನ್ನು ಸಂಪೂರ್ಣವಾಗಿ ಕಸಿಯುತ್ತದೆ, ಈ ಪರೀಕ್ಷೆಯು ದೊಡ್ಡ ಮಟ್ಟದಲ್ಲಿ ಸಿಬಿಎಸ್ಇ ಪಠ್ಯಕ್ರಮವನ್ನು ಆಧರಿಸಿರುವುದರಿಂದ, ಇತರ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಖಂಡಿತ ತೀವ್ರ ಸ್ವರೂಪದ ಅನಾನುಕೂಲವನ್ನುಂಟು ಮಾಡುತ್ತದೆ ಹಾಗೂ ಸಾಮಾನ್ಯ ಶಾಲಾ ಶಿಕ್ಷಣವನ್ನು ಹೊರತುಪಡಿಸಿ, ಈ ಪರೀಕ್ಷೆಯು ಗಣನೀಯ ಮೊತ್ತದ ಹೆಚ್ಚುವರಿ ತರಬೇತಿಯನ್ನು ಬಯಸುತ್ತದೆ. ಈ ಮೊತ್ತವನ್ನು ಎಲ್ಲ ವಿದ್ಯಾರ್ಥಿಗಳೂ ಭರಿಸಲು ಸಾಧ್ಯವಿಲ್ಲದೆ ಇರುವುದರಿಂದ ಭಾರತದ ವಿವಿಧ ರಾಜ್ಯಗಳು ಈ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿವೆ ಎಂಬ ಮೂರು ಅಂಶದ ನೆಲೆಯನ್ನು ಈ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
ಇದರೊಂದಿಗೆ, ಆಕ್ಷೇಪಗಳು ಅಂಕಿ-ಸಂಖ್ಯೆಗಳನ್ನು ಆಧರಿಸಿದ್ದು, ಹಿಂದಿನ ವರ್ಷಗಳಲ್ಲಿ ನೀಟ್ ಪರೀಕ್ಷೆಗೆ ಹಾಜರಾಗಿದ್ದ ರಾಜ್ಯ ಪರೀಕ್ಷಾ ಮಂಡಳಿಗಳ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ ಎಂದೂ ಮಸೂದೆಯು ಉಲ್ಲೇಖಿಸಿದೆ.