ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಮಹಿಳಾ ಉದ್ಯೋಗಿಗೂ ಆರು ತಿಂಗಳ ರಜೆಗೆ ಅವಕಾಶ

Update: 2024-06-24 15:51 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಸರಕಾರಿ ಉದ್ಯೋಗದಲ್ಲಿರುವ ಮಹಿಳೆಯರು ಇನ್ನು ಮುಂದೆ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದರೆ ಆರು ತಿಂಗಳ ಮಾತೃತ್ವ ರಜೆಯನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಕೇಂದ್ರವು 50 ವರ್ಷದ ಹಿಂದಿನ ನಿಯಮಕ್ಕೆ ತಿದ್ದುಪಡಿಗಳನ್ನು ಪ್ರಕಟಿಸಿದೆ.

1972ರ ಕೇಂದ್ರೀಯ ನಾಗರಿಕ ಸೇವಾ(ರಜೆ) ನಿಯಮಗಳಲ್ಲಿ ಮಾಡಲಾಗಿರುವ ಬದಲಾವಣೆಗಳಿಂದಾಗಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವ ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವ ‘ತಾಯಿ’ ಗೆ ಮಗುವಿನ ಆರೈಕೆಗಾಗಿ 180 ದಿನಗಳ ರಜೆಯ ಜೊತೆಗೆ ‘ತಂದೆ’ಯು ಸರಕಾರಿ ಉದ್ಯೋಗಿಯಾಗಿದ್ದರೆ 15 ದಿನಗಳ ಪಿತೃತ್ವ ರಜೆಯೂ ಸಿಗಲಿದೆ.

ಸಿಬ್ಬಂದಿ ಸಚಿವಾಲಯವು ನಿಯಮಗಳಲ್ಲಿ ತಿದ್ದುಪಡಿಗಳನ್ನು ಅಧಿಸೂಚಿಸಿದೆ.

ಬಾಡಿಗೆ ತಾಯ್ತನದ ಪ್ರಕರಣಗಳಲ್ಲಿ ಮಗುವನ್ನು ಹೆರುವ ಮಹಿಳೆ ಮತ್ತು ಎರಡಕ್ಕಿಂತ ಕಡಿಮೆ ಬದುಕಿರುವ ಮಕ್ಕಳನ್ನು ಹೊಂದಿರುವ, ಮಗುವನ್ನು ಪಡೆಯುವ ‘ತಾಯಿ ’ ಮತ್ತು ಇಬ್ಬರೂ ಸರಕಾರಿ ಉದ್ಯೋಗಿಗಳಾಗಿದ್ದರೆ 180 ದಿನಗಳ ಮಾತೃತ್ವ ರಜೆಯನ್ನು ಪಡೆದುಕೊಳ್ಳಬಹುದು ಎಂದು ತಿದ್ದುಪಡಿಗೊಳಿಸಿರುವ ನಿಯಮಗಳಲ್ಲಿ ತಿಳಿಸಲಾಗಿದೆ.

ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದರೆ ಮತ್ತು ‘ತಂದೆಯು’ ಎರಡಕ್ಕಿಂತ ಹೆಚ್ಚಿನ ಬದುಕಿರುವ ಮಕ್ಕಳನ್ನು ಹೊಂದಿರದಿದ್ದರೆ ಮಗು ಜನಿಸಿದ ದಿನಾಂಕದಿಂದ ಆರು ತಿಂಗಳ ಅವಧಿಯೊಳಗೆ 15 ದಿನಗಳ ಪಿತೃತ್ವ ರಜೆಯನ್ನು ಪಡೆದುಕೊಳ್ಳಬಹುದು ಎಂದೂ ನಿಯಮಗಳಲ್ಲಿ ಹೇಳಲಾಗಿದೆ.

ಸರಕಾರಿ ಉದ್ಯೋಗದಲ್ಲಿರುವ ಮಹಿಳೆ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದರೆ ಮಾತೃತ್ವ ರಜೆಯನ್ನು ನೀಡಲು ಯಾವುದೇ ನಿಯಮಗಳು ಈವರೆಗೆ ಇರಲಿಲ್ಲ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News