ಕೇರಳ ಕಾಲೇಜು ಫೆಸ್ಟ್‌ನಲ್ಲಿ ನಡೆದ ಕಾಲ್ತುಳಿತ ಘಟನೆಗೆ ಕಾರಣಗಳೇನು?

Update: 2023-11-26 08:27 GMT

Photo: PTI

ಕೊಚ್ಚಿ: ಕೇರಳದ ಕ್ಯಾಂಪಸ್ ಫೆಸ್ಟ್‌ ವೇಳೆ ಉಂಟಾದ ಹಠಾತ್ ನೂಕುನುಗ್ಗಲಿನಿಂದ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಅದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ (CUSAT) ತೆರೆದ ಸಭಾಂಗಣದಲ್ಲಿ ನಿನ್ನೆ ನಡೆಯಬೇಕಿದ್ದ ಗಾಯಕಿ ನಿಖಿತಾ ಗಾಂಧಿ ಅವರ ಸಂಗೀತ ಪ್ರದರ್ಶನಕ್ಕಿಂತ ಮುನ್ನ ಈ ದುರ್ಘಟನೆ ಸಂಭವಿಸಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಬಯಲು ಸಭಾಂಗಣಕ್ಕೆ ಪ್ರವೇಶ ಮತ್ತು ನಿರ್ಗಮನಕ್ಕಾಗಿ ಒಂದೇ ಗೇಟ್ ಅನ್ನು ಬಳಸಲಾಗುತ್ತಿತ್ತು. ಪಾಸ್‌ಗಳನ್ನು ಹೊಂದಿರುವವರಿಗೆ ಪ್ರವೇಶವನ್ನು ಸಂಘಟಕರು ಅನುಮತಿಸುತ್ತಿದ್ದರು. ಪ್ರವೇಶ ದ್ವಾರದ ಹೊರಗೆ ಉತ್ಸಾಹಭರಿತ ಯುವಕರು ಸಂಗೀತ ಪ್ರದರ್ಶನಕ್ಕೆ ಸೇರಲು ಉತ್ಸುಕರಾಗಿ ಗುಂಪುಗೂಡಿದ್ದರು. ಆದರೆ, ಸಂಗೀತ ಗೋಷ್ಠಿಗೆ ಪಾಸ್ ಹೊಂದಿರುವವರಿಗೆ ಕೂಡಾ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂಬ ವದಂತಿ ಹಬ್ಬುತ್ತಿದ್ದಂತೆ ಜನರು ತಂಡೋಪತಂಡವಾಗಿ ಜಮಾಯಿಸಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

“ಸಭಾಂಗಣದ ಸಾಮರ್ಥ್ಯ ಕನಿಷ್ಠ 1,000 ಆಗಿತ್ತು. ಕಾಲ್ತುಳಿತದ ಸಮಯದಲ್ಲಿ ಅನೇಕ ಆಸನಗಳು ಖಾಲಿಯಾಗಿದ್ದವು. ಘಟನೆ ನಡೆದಾಗ, ಕಾರ್ಯಕ್ರಮ ಪ್ರಾರಂಭವಾಗಿರಲಿಲ್ಲ. ಸಭಾಂಗಣ ತುಂಬಿರಲಿಲ್ಲ. ಸಂಘಟಕರು ಪಾಸ್‌ಗಳನ್ನು ಪರಿಶೀಲಿಸುತ್ತಿದ್ದರು. ಬ್ಯಾಚ್‌ಗಳಲ್ಲಿ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದರು. ಇದ್ದಕ್ಕಿದ್ದಂತೆ ಮಳೆ ಪ್ರಾರಂಭವಾಯಿತು, ಜನರು ಸರತಿ ಸಾಲುಗಳನ್ನು ಮುರಿದು ಒಳಗೆ ನುಗ್ಗತೊಡಗಿದರು” ಎಂದು ಹಿರಿಯ ಪೊಲೀಸ್ ಅಧಿಕಾರಿ ಎಂ.ಆರ್.ಅಜಿತ್ ಕುಮಾರ್ ಹೇಳಿದ್ದಾರೆ,

"ಅಲ್ಲಿ ಮೆಟ್ಟಿಲುಗಳಿದ್ದರಿಂದ ಕೆಲವರು ಬಿದ್ದರು. ಇತರರು ಅವರ ಮೇಲೆಯೇ ಏರಿ ನಡೆದರು. ಹೀಗಾಗಿ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟರು. ಇದು ಒಂದು ವಿಚಿತ್ರವಾದ ಅಪಘಾತ" ಎಂದು ಅವರು ಹೇಳಿದ್ದಾರೆ.

ಸಭಾಂಗಣವು ಸಾಕಷ್ಟು ಸಾಮರ್ಥ್ಯ ಹೊಂದಿದ್ದರಿಂದ ಈ ದುರ್ಘಟನೆಯು ಸಂಭವಿಸಬಾರದಿತ್ತು. ಆದರೆ, ಧೀಡೀರ್‌ ಬಂದ ಮಳೆಯಿಂದಾಗಿ ಜನರು ಏಕಾಏಕಿ ನುಗ್ಗಿದ್ದು ಇದಕ್ಕೆ ಕಾರಣವಾಯಿತು" ಎಂದು ಅವರು ಹೇಳಿದರು.

ಮೂಲಗಳ ಪ್ರಕಾರ, ದುರಂತಕ್ಕೆ ಮತ್ತೊಂದು ಅಂಶ ಕೂಡಾ ಕಾರಣವಾಗಿದೆ.

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೊದಲು ಪ್ರವೇಶ ನೀಡಲಾಗುವುದು ಎಂದು ಸಂಘಟಕರು ಘೋಷಿಸಿದ್ದರು. ಇದು ಇತರ ವಿಭಾಗಗಳ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಗೊಂದಲ ನಡೆಯುತ್ತಿರುವಾಗಲೇ ಮಳೆ ಸುರಿಯಲು ಆರಂಭಿಸಿತ್ತು. ಈ ವೇಳೆ ಸರದಿಯನ್ನು ತಪ್ಪಿಸಿ ಒಳಗೆ ನುಗ್ಗಲು ಹಲವರು ಪ್ರಯತ್ನಿಸಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ndtv.com ವರದಿ ಮಾಡಿದೆ.

ಬಯಲು ಸಭಾಂಗಣದ ಬಳಿ ಮೆಟ್ಟಿಲುಗಳು ತುಂಬಾ ಕಡಿದಾಗಿದ್ದವು. ಇದರಿಂದ ಕೆಲವು ವಿದ್ಯಾರ್ಥಿಗಳು ತಮ್ಮ ಸಮತೋಲನವನ್ನು ಕಳೆದುಕೊಂಡಿರಬಹುದು ಎಂದು NDTV ತನ್ನ ವರದಿಯಲ್ಲಿ ಹೇಳಿದೆ.

ಪ್ರವೇಶ ಮತ್ತು ನಿರ್ಗಮನಕ್ಕೆ ಒಂದೇ ಗೇಟ್ ಬಳಸುತ್ತಿರುವುದು ಕೂಡ ಘಟನೆಗೆ ಕಾರಣವಾಗಿದೆ ಎಂದು ನಗರಸಭೆ ಸದಸ್ಯ ಪ್ರಮೋದ್ ಹೇಳಿದ್ದಾರೆ.

ಮೃತ ವಿದ್ಯಾರ್ಥಿಗಳನ್ನು ಅತುಲ್ ತಂಬಿ, ಆನ್ ರುಫ್ತಾ, ಸಾರಾ ಥಾಮಸ್ ಮತ್ತು ಅಲ್ವಿನ್ ತಾಯ್ಕಟ್ಟುಶೆರಿ ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. 30ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News