ಮಣಿಪುರ ಐಆರ್ ಬಿಯಿಂದ ಅಪಾರ ಶಸ್ತ್ರಾಸ್ತ್ರ ಲೂಟಿ ಮಾಡಿದ ಗುಂಪು
ಗುವಾಹತಿ: ಗಲಭೆಗ್ರಸ್ತ ಮಣಿಪುರದಲ್ಲಿ ಬಿಷ್ಣುಪುರದ 2ನೇ ಭಾರತೀಯ ಮೀಸಲು ಬೆಟಾಲಿಯನ್ (ಐಆರ್ ಬಿ) ಕೇಂದ್ರ ಕಚೇರಿಯಲ್ಲಿ ಯೋಧರು ಅಪಾರ ಶಸ್ತ್ರಾಸ್ತ್ರ ಲೂಟಿ ಮಾಡಿದ ಗುಂಪನ್ನು ಚದುರಿಸಲು 20 ಅಶ್ರುವಾಯುಗಳನ್ನು ಸಿಡಿಸಿದ್ದಲ್ಲದೇ 327 ಸುತ್ತು ಗುಂಡು ಹಾರಿಸಿದರು.
ಆದರೂ ಶಸ್ತ್ರಾಸ್ತ್ರ ಲೂಟಿ ತಡೆಯಲು ಐಆರ್ ಬಿ ಯೋಧರು ವಿಫಲವಗಿದ್ದು, 298 ರೈಫಲ್, ಎಸ್‍ಎಲ್‍ಆರ್ ಮತ್ತು ಎಲ್‍ಎಂಜಿಗಳನ್ನು, ಫಿರಂಗಿ, ಗ್ರೆನೇಡ್ ಹಾಗೂ 16 ಸಾವಿರ ಸುತ್ತು ಗುಂಡುಗಳನ್ನು 500 ಮಂದಿಯ ಗುಂಪು ಲೂಟಿ ಮಾಡಿದೆ.
ಮೇ 3ರಂದು ರಾಜ್ಯದಲ್ಲಿ ಜನಾಂಗೀಯ ಕಲಹ ಆರಂಭವಾದ ಬಳಿಕ ಶಸ್ತ್ರಾಸ್ತ್ರ ಲೂಟಿ ಮಾಡಿದ ಅತಿದೊಡ್ಡ ಪ್ರಕರಣಗಳಲ್ಲಿ ಇದೂ ಒಂದಾಗಿದೆ ಎಂದು ಮೊಯಿರಂಗ್ ಠಾಣೆಯಲ್ಲಿ ಐಆರ್ ಬಿ ಕೇಂದ್ರ ಕಚೇರಿ ಮುಖ್ಯಸ್ಥರು ನೀಡಿದ ದೂರಿನಲ್ಲಿ ವಿವರಿಸಲಾಗಿದೆ.
ಬಿಗಿ ಭದ್ರತೆಯ 2ನೇ ಐಆರ್ ಬಿ ಕೇಂದ್ರ ಕಚೇರಿಯ ರಕ್ಷಣಾ ಕೋಟೆಯನ್ನು ಭೇದಿಸಿ ಈ ಗುಂಪು ಹೇಗೆ ಶಸ್ತ್ರಾಗಾರ ಲೂಟಿ ಮಾಡಲು ಸಾಧ್ಯವಾಯಿತು ಎಂದು ಮಣಿಪುರ ಡಿಜಿಪಿ ರಾಜೀವ್ ಸಿಂಗ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
"ಈ ಹಿಂದೆಯೂ ಶಸ್ತ್ರಾಸ್ತ್ರ ಲೂಟಿ ಆಗಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡುವುದು ಗಂಭೀರ ಅಪರಾಧ. ಐಜಿಪಿ ಶ್ರೇಣಿಯ ಅಧಿಕಾರಿಯನ್ನು ಕೇಂದ್ರ ಕಚೇರಿಗೆ ಕಳುಹಿಸಿ ತನಿಖೆ ನಡೆಸಲಾಗುತ್ತಿದೆ" ಎಂದು ವಿವರಿಸಿದ್ದಾರೆ.
ಒಂದು ಕಲಶ್ನಿಕೋವ್, ಮೂರು ಘಾಟಕ್, ಅಷ್ಟೇ ಸಂಖ್ಯೆಯ ಎಕ್ಸ್‍ಕ್ಯಾಲಿಬರ್ ಗನ್, 6.56 ಎಂಎಂನ 25 ಇನ್ಸಾಸ್ ರೈಫಲ್, 5.56 ಎಂಎಂನ ಐದು ಇನ್ಸಾಸ್ ಎಲ್‍ಎಂಜಿ, ಅಷ್ಟೇ ಸಂಖ್ಯೆಯ ಎಂಪಿ5, 9 ಎಂಎಂ ಕ್ಯಾಲಿಬ್ರೆಯ 16 ಪಿಸ್ತೂಲುಗಳು. 7.62 ಎಂಎಂನ 195 ಎಸ್‍ಎಲ್‍ಆರ್‍ಗಳು, 21 ಎಸ್‍ಎಂಸಿ ಕಾರ್ಬೈನ್‍ಗಳು, ಮೂರು 7.62 ಎಲ್‍ಎಂಜಿಗಳು, ಒಂದು 0.303 ಎಲ್‍ಎಂಜಿ, 4 ಅಮೋಘ್ ಕಾರ್ಬೈನ್‍ಗಳು, 23 ಜಿಎಫ್ ರೈಫಲ್‍ಗಳು, ಎರಡು .22 ರೈಫಲ್‍ಗಳು ಹಾಗೂ ಹಲವು ಮದ್ದುಗುಂಡುಗಳು ಸೇರಿವೆ.
ಇದರ ಜತೆಗೆ ಮೂರು 51 ಎಂಎಂ ಫಿರಂಗಿ, 124 ಕೈಬಾಂಬ್‍ಗಳು, 51 ಎಂಎಂನ 71 ಎಚ್‍ಇ ಬಾಂಬ್‍ಗಳು, 25 ಗುಂಡುನಿರೋಧಕ ಜಾಕೆಟ್‍ಗಳು, 23 ಕೆಲ್ವರ್ ದೇಹಸ್ತ್ರಾಣಗಳು, 115 ಬಯೋನೆಟ್‍ಗಳು, 16245 ಮದ್ದುಗುಂಡುಗಳನ್ನೂ ಈ ಗುಂಪು ಅಪಹರಿಸಿದೆ.