ಭೂಕುಸಿತದಿಂದ ಕೊಚ್ಚಿಹೋದ ರಸ್ತೆ: ಗರ್ಭಿಣಿಯನ್ನು ಕುರ್ಚಿಯಲ್ಲಿ ಹೊತ್ತೊಯ್ದ ಗ್ರಾಮಸ್ಥರು

Update: 2023-08-19 02:52 GMT

Photo: PTI

ಡೆಹ್ರಾಡೂನ್: ಭಾರಿ ಮಳೆ ಕಾರಣದಿಂದ ಸಂಚಾರಯೋಗ್ಯ ರಸ್ತೆ ಕೊಚ್ಚಿಹೋದ ಹಿನ್ನೆಲೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿ ಮಹಿಳೆಯನ್ನು ಪ್ಲಾಸ್ಟಿಕ್ ಕುರ್ಚಿಯಲ್ಲಿ ಕೂರಿಸಿ ಹೆಗಲಲ್ಲಿ ಹೊತ್ತುಕೊಂಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದ ಘಟನೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ದೇವಲ್ ಪ್ರದೇಶದ ಬನ್ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಈ ವಾರ ಚಮೋಲಿ ಜಿಲ್ಲೆಯಲ್ಲಿ ಭಾರಿ ಮಳೆ ದೊಡ್ಡ ಅನಾಹುತಗಳನ್ನು ಸೃಷ್ಟಿಸಿದ್ದು, ದೇವಲ್ ಪ್ರದೇಶದ ಬನ್ ಗ್ರಾಮಸ್ಥರಿಗೆ ಸಂಚರಿಸಲು ಯೋಗ್ಯವಾದ ರಸ್ತೆ ಸಂಪರ್ಕ ಕಡಿದುಹೋಗಿತ್ತು.

ಈ ಮಧ್ಯೆ ಗ್ರಾಮದ ಕಿರಣ್ ದೇವಿ (29) ಎಂಬ ಮಹಿಳೆಗೆ ಹೆರಿಗೆ ನೋವು ಆರಂಭವಾಗಿತ್ತು. ಕೊನೆಗೂ ಪ್ರಕರಣ ಸುಖಾಂತ್ಯ ಕಂಡಿದ್ದು, ಗುರುವಾರ ತಡರಾತ್ರಿ ಕಿರಣ್, ಆರೋಗ್ಯವಂತ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಈ ಮಹಿಳೆಯನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಕರೆದೊಯ್ಯುತ್ತಿರುವ ಸಾಹಸಯಾತ್ರೆಯ ವೀಡಿಯೋ ವೈರಲ್ ಆಗಿದ್ದು, ಭೀಕರ ಭೂಕುಸಿತದಿಂದ ಆಗಿರುವ ಹಾನಿಯ ಸ್ವರೂಪ ಮತ್ತು ಪ್ರಮಾಣದ ಬಗ್ಗೆ ಜನ ಆಘಾತಕ್ಕೀಡಾಗಿದ್ದಾರೆ.

ದೇವಲ್ ಪ್ರಾಥಮಿಕ ಆರೋಗ್ಯ ಕೇಂದ್ರ ನಮ್ಮ ಗ್ರಾಮದಿಂದ 30 ಕಿಲೋಮೀಟರ್ ದೂರದಲ್ಲಿದೆ. ಆದರೆ ಭಾರಿ ಮಳೆಯಿಂದಾಗಿ ಎರಡು ದಿನಗಳಿಂದ ರಸ್ತೆ ಸಂಪರ್ಕ ಕಡಿದು ಹೋಗಿದ್ದು,

ಸುಮಾರು ಮೂರು ಕಿಲೋಮೀಟರ್ಗೂ ಹೆಚ್ಚು ಉದ್ದದ ರಸ್ತೆಯಲ್ಲಿ ಸಂಚಾರ ಸಾಧ್ಯವಿಲ್ಲ. ಕಿರಣ್ ಅವರನ್ನು ಹೆಗಲಲ್ಲಿ ಹೊತ್ತೊಯ್ಯುತ್ತಿದ್ದ ಮಂದಿ ಭೋರ್ಗರೆಯುವ ನದಿಗೆ ಅಡ್ಡಲಾಗಿ ಹಾಕಿದ್ದ ಪೈಪ್ ಹಾಗೂ ಮರದ ದಿಮ್ಮಿಯಲ್ಲಿ ಸಮತೋಲನ ಸಾಧಿಸಿಕೊಂಡು ಆಳವಾದ ಕಂದಕವನ್ನು ದಾಟಬೇಕಾಯಿತು. ಕಳೆದ 55 ವರ್ಷಗಳಿಂದ ಇಂಥ ದೊಡ್ಡ ಪ್ರಮಾಣದ ಹಾನಿಯನ್ನು ಈ ಗ್ರಾಮ ಕಂಡಿಲ್ಲ ಎಂದು ಗ್ರಾಮಸ್ಥ ಖಿಲಾಫ್ ಸಿಂಗ್ ಹೇಳಿದ್ದಾರೆ.

"ಕಿರಣ್ ಹಾಗೂ ಆಕೆಯ ಮಗು ಆರೋಗ್ಯವಾಗಿದ್ದಾರೆ. ತಾಯಿಯ ಜತೆ ಆಶಾ ಕಾರ್ಯಕರ್ತೆಯೊಬ್ಬರು ಇದ್ದು ಯೋಗ ಕ್ಷೇಮ ನೋಡಿಕೊಳ್ಳುತ್ತಿದ್ದಾರೆ" ಎಂದು ಮುಖ್ಯ ವೈದ್ಯಾಧಿಕಾರಿ ಡಾ.ರಾಜೀವ್ ಶರ್ಮಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News