ಸಂಸತ್ತಿನ ಇತಿಹಾಸದಲ್ಲಿ ಕಳಂಕಿತ ದಿನ : ಪರಸ್ಪರರ ವಿರುದ್ಧ ಖರ್ಗೆ ಮತ್ತು ಧನ್ಕರ್ ವಾಗ್ದಾಳಿ

Update: 2024-06-28 16:12 GMT

 ಧನ್ಕರ್ , ಮಲ್ಲಿಕಾರ್ಜುನ ಖರ್ಗೆ |  PC : NDTV 

ಹೊಸದಿಲ್ಲಿ : ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಶುಕ್ರವಾರ ರಾಜ್ಯಸಭೆಯಲ್ಲಿ ಸಭಾಪತಿ ಜಗದೀಪ್‌ ಧನ್ಕರ್ ಅವರ ಗಮನವನ್ನು ಸೆಳೆಯಲು ಇತರ ಸದಸ್ಯರೊಂದಿಗೆ ಸದನದ ಅಂಗಳಕ್ಕೆ ಲಗ್ಗೆಯಿಡುವುದರೊಂದಿಗೆ ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸರಕಾರ ಮತ್ತು ಪ್ರತಿಪಕ್ಷ ನಡುವಿನ ಬಿಕ್ಕಟ್ಟು ತಾರಕಕ್ಕೇರಿತು. ನೀಟ್ ವಿಷಯದಲ್ಲಿ ಚರ್ಚೆಗೆ ಪ್ರತಿಪಕ್ಷಗಳ ಬೇಡಿಕೆಗೆ ಒತ್ತು ನೀಡಲು ಸದನದ ಅಂಗಳದಲ್ಲಿ ನೆರೆದ ವಿದ್ಯಮಾನವು ಖರ್ಗೆ ಮತ್ತು ಧನ್ಕರ್ ನಡುವೆ ತೀವ್ರ ವಾಗ್ಯುದ್ಧಕ್ಕೆ ಕಾರಣವಾಯಿತು.

ತಾನು ಆಘಾತಗೊಂಡಿದ್ದೇನೆ,ತನಗೆ ನೋವಾಗಿದೆ. ವಿಪಕ್ಷ ನಾಯಕರೆಂದೂ ಸದನದ ಅಂಗಳಕ್ಕೆ ಇಳಿದಿರಲಿಲ್ಲ ಎಂದು ಧನ್ಕರ್ ಹೇಳಿದರೆ, 10 ನಿಮಿಷಗಳ ಕಾಲ ತಾನು ಕೈಗಳನ್ನು ಎತ್ತಿದ್ದರೂ ತನ್ನನ್ನು ಕಡೆಗಣಿಸಿದ್ದರಿಂದ ತಾನು ಹೀಗೆ ಮಾಡಬೇಕಾಯಿತು ಎಂದು ಖರ್ಗೆ ಹೇಳಿದರು. ಪ್ರತಿಪಕ್ಷಗಳ ಬಗ್ಗೆ ಸಭಾಪತಿಗಳ ಮಲತಾಯಿ ಧೋರಣೆಯು ಭಾರತೀಯ ಸಂಸತ್ತಿನ ಇತಿಹಾಸವನ್ನು ಕಳಂಕಿತಗೊಳಿಸಿದೆ ಎಂದು ಕಿಡಿಕಾರಿದರು.

24 ಲ.ವಿದ್ಯಾರ್ಥಿಗಳ ಮೇಲೆ ಪರಿಣಾಮವನ್ನು ಬೀರಿರುವ ನೀಟ್-ಯುಜಿ ಸೇರಿದಂತೆ ಪ್ರಶ್ನೆಪತ್ರಿಕೆಗಳ ಸೋರಿಕೆ ಕುರಿತು ಚರ್ಚೆಗೆ ಬೇಡಿಕೆಗಳ ನಡುವೆಯೇ ಖರ್ಗೆ ಇತರ ಪ್ರತಿಪಕ್ಷ ಸದಸ್ಯರೊಂದಿಗೆ ಸದನದ ಅಂಗಳವನ್ನು ಪ್ರವೇಶಿಸಿದ್ದು ಧನ್ಕರ್ ಅವರ ಕಟು ಪ್ರತಿಕ್ರಿಯೆಗೆ ಕಾರಣವಾಗಿತ್ತು.

‘ವಿಪಕ್ಷ ನಾಯಕರು ಸದನದ ಅಂಗಳವನ್ನು ಪ್ರವೇಶಿಸುವುದರೊಂದಿಗೆ ಇಂದು ಸಂಸತ್ತಿನ ಇತಿಹಾಸದಲ್ಲಿ ಕಳಂಕಿತ ದಿನವಾಗಿದೆ. ಇದು ಹಿಂದೆಂದೂ ಸಂಭವಿಸಿರಲಿಲ್ಲ. ನನಗೆ ನೋವಾಗಿದೆ,ನಾನು ಆಘಾತಗೊಂಡಿದ್ದೇನೆ. ಭಾರತೀಯ ಸಂಸದೀಯ ಸಂಪ್ರದಾಯವು ಹದಗೆಡುತ್ತಿದೆ,ವಿಪಕ್ಷ ನಾಯಕರು,ಉಪನಾಯಕರು ಸದನದ ಅಂಗಳಕ್ಕೆ ನುಗ್ಗುತ್ತಾರೆ ’ಎಂದು ಧನ್ಕರ್ ಸದನವನ್ನು ಅಪರಾಹ್ನ ಎರಡು ಗಂಟೆಯವರೆಗೆ ಮುಂದೂಡುವ ಮುನ್ನ ಹೇಳಿದರು.

ತನ್ನ ಕ್ರಮದ ಕುರಿತು ರಾಜ್ಯಸಭೆಯ ಹೊರಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಖರ್ಗೆ,ಧನ್ಕರ್ ತನ್ನನ್ನು ಅವಮಾನಿಸಲು ತನ್ನನ್ನು ಕಡೆಗಣಿಸಿದ್ದರಿಂದ ತನಗೆ ಬೇರೆ ಆಯ್ಕೆಯೇ ಇರಲಿಲ್ಲ ಎಂದು ಹೇಳಿದರು.

‘ಇದು ನಿಜಕ್ಕೂ ಸಭಾಪತಿಗಳ ತಪ್ಪು. ನಾನು ಸಂಸತ್ತಿನ ನಿಯಮಗಳನ್ನು ಪಾಲಿಸಿದ್ದೆ ಮತ್ತು ಹತ್ತು ನಿಮಿಷಗಳ ಕಾಲ ನನ್ನ ಕೈಯನ್ನು ಎತ್ತಿಯೇ ಇದ್ದೆ,ಆದರೆ ಅವರು ನನ್ನತ್ತ ನೋಡಲೂ ಇಲ್ಲ. ಹೀಗಾಗಿ ಅವರ ಗಮನ ಸೆಳೆಯಲು ನಾನು ಸದನದ ಅಂಗಳಕ್ಕೆ ತೆರಳಬೇಕಾಯಿತು,ಆಗಲೂ ಅವರು ನನ್ನತ್ತ ನೋಡಲಿಲ್ಲ. ಇತರ ಎಲ್ಲ ಸದಸ್ಯರು ಅಂಗಳಕ್ಕೆ ಬಂದಾಗ ನಾನು ಅಲ್ಲಿಂದ ಹೊರಬಂದಿದ್ದೆ, ಅಲ್ಲಿ ನಿಲ್ಲಲೂ ಇಲ್ಲ. ನಾನು ಸಭಾಪತಿಗಳ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತಿದ್ದೆ, ಆದರೆ ಅವರು ಆಡಳಿತ ಪಕ್ಷದ ಆಸನಗಳತ್ತಲೇ ನೋಡುತ್ತಿದ್ದರು. ನಾನು ನನ್ನ ಕೈ ಎತ್ತಿದಾಗ ನಿಯಮಗಳ ಪ್ರಕಾರ ಅವರು ನನ್ನತ್ತ ನೋಡಬೇಕಿತ್ತು, ಆದರೆ ಅವರು ನನ್ನನ್ನು ಕಡೆಗಣಿಸಿ ನನ್ನನ್ನು ಅವಮಾನಿಸಿದ್ದರು’ ಎಂದು ಖರ್ಗೆ ಹೇಳಿದರು.

‘ನಾನು ನನ್ನ ಆಸನದಿಂದ ಜೋರಾಗಿ ಕೂಗುವುದು ನನಗಿದ್ದ ಏಕೈಕ ಇನ್ನೊಂದು ಆಯ್ಕೆಯಾಗಿತ್ತು. ಹೀಗಾಗಿ ತಪ್ಪು ಸಭಾಪತಿಗಳದ್ದಾಗಿತ್ತು ಎಂದು ನಾನು ಹೇಳಬೇಕಿದೆ. ನೀಟ್ ಪರೀಕ್ಷೆಯಲ್ಲಿ ಇಷ್ಟೊಂದು ದೊಡ್ಡ ಹಗರಣ ನಡೆದಿದೆ. ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಚಿಂತೆಗೀಡಾಗಿದ್ದಾರೆ. ನಾವು ನಿರ್ದಿಷ್ಟ ಚರ್ಚೆಗಾಗಿ ಮಾತ್ರ ಆಗ್ರಹಿಸುತ್ತಿದ್ದೇವೆ ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳನ್ನೆತ್ತಲು ಪ್ರಯತ್ನಿಸುತ್ತಿದ್ದೇವೆ ’ ಎಂದು ಖರ್ಗೆ ಹೇಳಿದರು.

ಬಳಿಕ ಎಕ್ಸ್ ಪೋಸ್ಟ್ ನಲ್ಲಿ ಖರ್ಗೆ, ಸಭಾಪತಿಗಳು ಪ್ರತಿಪಕ್ಷದ ಬಗ್ಗೆ ಮಲತಾಯಿ ಧೋರಣೆಯನ್ನು ಹೊಂದಿದ್ದಾರೆ ಎಂದು ಆಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News