ಮತದಾರರ ಪಟ್ಟಿ ದೃಢೀಕರಣಕ್ಕೆ ನಾಗರಿಕರು ಆಧಾರ್ ಸಂಖ್ಯೆ ನೀಡುವುದು ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಚುನಾವಣಾ ಆಯೋಗ
Update: 2023-09-22 11:14 GMT
ಹೊಸದಿಲ್ಲಿ,ಸೆ.22: ಮತದಾರರ ಪಟ್ಟಿ ದೃಢೀಕರಣಕ್ಕೆ ನಾಗರಿಕರು ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಲ್ಲ ಎಂದು ಚುನಾವಣಾ ಆಯೋಗವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಇದಕ್ಕಾಗಿ ಮತದಾರರ ಪಟ್ಟಿ ನೋಂದಣಿ ನಮೂನೆಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡುವುದಾಗಿಯೂ ಅದು ಹೇಳಿದೆ.
ಮತದಾರರ ಪಟ್ಟಿಗಳಲ್ಲಿ ಹೊಸ ಮತದಾರರ ಮಾಹಿತಿ ದೃಢೀಕರಣಕ್ಕಾಗಿ ನೋಂದಣಿ ನಮೂನೆಗಳಲ್ಲಿ ಆಧಾರ್ ವಿವರಗಳನ್ನು ಅಗತ್ಯವಾಗಿಸಿದ್ದನ್ನು ಪ್ರಶ್ನಿಸಿ ತೆಲಂಗಾಣದ ಕಾಂಗ್ರೆಸ್ ನಾಯಕ ಜಿ.ನಿರಂಜನ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಕೈಗೆತ್ತಿಕೊಂಡಿತ್ತು.
ಮತದಾರರ ನೋಂದಣಿ (ತಿದ್ದುಪಡಿ) ನಿಯಮಗಳು 2022ರ ನಿಯಮ 26-ಬಿ ಅಡಿ ಆಧಾರ್ ಸಂಖ್ಯೆಗಳನ್ನು ಒದಗಿಸುವುದು ಕಡ್ಡಾಯವಲ್ಲ ಎಂದು ಚುನಾವಣಾ ಆಯೋಗದ ವಕೀಲರಾದ ಸುಕುಮಾರ ಪಟ್ಟಜೋಶಿ ಮತ್ತು ಅಮಿತ್ ಶ್ರೀವಾಸ್ತವ ಅವರು ತಿಳಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಅರ್ಜಿಯನ್ನು ವಿಲೇವಾರಿಗೊಳಿಸಿತು.