ಹರ್ಯಾಣದಿಂದ ದಿಲ್ಲಿಗೆ ನೀರು ಬಿಡುಗಡೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ದಿಲ್ಲಿ ಸಚಿವೆ ಅತಿಶಿ
ಹೊಸದಿಲ್ಲಿ; ದಿಲ್ಲಿಗೆ ಹರ್ಯಾಣದಿಂದ ಪ್ರತಿನಿತ್ಯ 100 ದಶಲಕ್ಷ ಗ್ಯಾಲನ್ ನೀರನ್ನು ಪಡೆಯುವ ಗುರಿಯೊಂದಿಗೆ ದಿಲ್ಲಿ ಸಚಿವೆ ಅತಿಶಿ ಇಂದು ಮಧ್ಯಾಹ್ನದಿಂದ ಭೋಗಾಲ್ ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅತಿಶಿ, ದಣಿವರಿಯದ ಪ್ರಯತ್ನಗಳ ಹೊರತಾಗಿಯೂ ದಿಲ್ಲಿಯ ಪೂರ್ಣಪ್ರಮಾಣದ ಪಾಲಿನ ನೀರನ್ನು ಹರ್ಯಾಣ ಸರಕಾರ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ತಮ್ಮ ಪ್ರತಿಭಟನೆಗೂ ಮುನ್ನ, ಬೆಳಗ್ಗೆ 11 ಗಂಟೆಗೆ ರಾಜ್ ಘಾಟ್ ನಲ್ಲಿರುವ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿದ ಅತಿಶಿ, ಮಹಾತ್ಮ ಗಾಂಧೀಜಿ ಅವರಿಗೆ ಗೌರವ ನಮನ ಸಲ್ಲಿಸಿದರು. ಆ ಮೂಲಕ ಅನ್ಯಾಯದ ವಿರುದ್ಧ ಸತ್ಯಾಗ್ರಹದ ಮೂಲಕ ಹೋರಾಟ ನಡೆಸುವುದಾಗಿ ಪಣ ತೊಟ್ಟರು.
ಇದಕ್ಕೂ ಮುನ್ನ, ಕಳೆದ ಎರಡು ವಾರಗಳಿಂದ ದಿಲ್ಲಿಯ ಪಾಲಾದ ಪ್ರತಿನಿತ್ಯದ 613 ಎಂಜಿಡಿ ನೀರಿನ ಬದಲು ಹರ್ಯಾಣ ರಾಜ್ಯವು ಪ್ರತಿನಿತ್ಯ ಕೇವಲ 100 ದಶಲಕ್ಷ ಗ್ಯಾಲನ್ ನೀರು ಪೂರೈಸುತ್ತಿದೆ. ಇದರಿಂದ ದಿಲ್ಲಿಯ 28 ಲಕ್ಷ ನಿವಾಸಿಗಳ ಮೇಲೆ ದುಷ್ಪರಿಣಾಮವುಂಟಾಗಿದೆ ಎಂದು ಅವರು ದೂರಿದ್ದರು.
ದಿಲ್ಲಿಯಲ್ಲಿ ತೀವ್ರ ಸ್ವರೂಪದ ಬಿಸಿ ಗಾಳಿ ಬೀಸುತ್ತಿರುವುದರಿಂದ, ದಿಲ್ಲಿಯಲ್ಲಿ ನೀರಿಗಾಗಿ ವಿಪರೀತ ಪರದಾಟ ಪ್ರಾರಂಭಗೊಂಡಿದೆ.