ಇಂದು ಆಪ್ ಶಾಸಕರ ನಿರ್ಣಾಯಕ ಸಭೆ: ಯಾರಾಗಲಿದ್ದಾರೆ ಕೇಜ್ರಿವಾಲ್ ʼಉತ್ತರಾಧಿಕಾರಿʼ?
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಆಪ್ ಶಾಸಕರು ಬೆಳಿಗ್ಗೆ 11.30ಕ್ಕೆ ಅವರ ನಿವಾಸದಲ್ಲಿ ನಿರ್ಣಾಯಕ ಸಭೆ ನಡೆಸಲಿದ್ದಾರೆ.
ಅರವಿಂದ್ ಕೇಜ್ರಿವಾಲ್ ಇಂದು ಸಂಜೆ 4.30ಕ್ಕೆ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.
ದಿಲ್ಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ 6 ತಿಂಗಳ ಜೈಲು ವಾಸದ ಬಳಿಕ ಕೇಜ್ರಿವಾಲ್ ಬಿಡುಗಡೆಯಾಗಿದ್ದರು. ದಿಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಅವರು ರವಿವಾರ ಘೋಷಿಸಿದ್ದರು.
ಸೋಮವಾರ AAP ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆದಿದೆ. ಉತ್ತರಾಧಿಕಾರಿಯ ನೇಮಕಕ್ಕೆ ಸಂಬಂಧಿಸಿ ಕೇಜ್ರಿವಾಲ್ ಒಂದರ ಹಿಂದೆ ಒಂದರಂತೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಸೇರಿದಂತೆ ಹಿರಿಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ದಿಲ್ಲಿಯ ಸಚಿವರಾದ ಅತಿಶಿ, ಗೋಪಾಲ್ ರಾಯ್, ಕೈಲಾಶ್ ಗಹ್ಲೋಟ್ ಮತ್ತು ಸೌರಭ್ ಭಾರದ್ವಾಜ್ ಅವರ ಹೆಸರುಗಳು ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬಂದಿದೆ. ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಮತ್ತು ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಕೂಡ ಸಾಂಭವ್ಯರ ಪಟ್ಟಿಯಲ್ಲಿದ್ದಾರೆ.
ಇದಲ್ಲದೆ ಪಕ್ಷವು ಅಚ್ಚರಿ ಅಭ್ಯರ್ಥಿಯೋರ್ವರನ್ನು ಅಂದರೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ದಿಲ್ಲಿ ಸಚಿವ ಇಮ್ರಾನ್ ಹುಸೇನ್ ಅವರನ್ನು ಸಿಎಂ ಮಾಡುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗಿದೆ.