ಪ್ರಮಾದವಶಾತ್ ಭಾರತ ಭೂಭಾಗ ಪ್ರವೇಶ | ಪಾಕಿಸ್ತಾನ ಪ್ರಜೆಯನ್ನು ರೇಂಜರ್‌ಗಳಿಗೆ ಹಸ್ತಾಂತರಿಸಿದ ಭಾರತ
ಪಝಿಲ್ಕಾ (ಪಂಜಾಬ್) : ಅಜಾಗರೂಕತೆಯಿಂದ ಭಾರತದ ಭೂಪ್ರದೇಶ ಪ್ರವೇಶಿಸಿದ ಬಳಿಕ ಬಂಧಿತನಾದ ಪಾಕಿಸ್ತಾನಿ ಪ್ರಜೆಯನ್ನು ಮಾನವೀಯ ನೆಲೆಯಲ್ಲಿ ಪಾಕಿಸ್ತಾನದ ರೇಂಜರ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಗಡಿ ಭದ್ರತಾ ಪಡೆಯ ವಕ್ತಾರರು ರವಿವಾರ ತಿಳಿಸಿದ್ದಾರೆ.
ಪಂಜಾಬ್‌ನ ಫಝಿಲ್ಕಾ ಜಿಲ್ಲೆಯ ಗಡಿ ಬೇಲಿ ಸಮೀಪ ಪಾಕಿಸ್ತಾನಿ ಪ್ರಜೆಯನ್ನು ಗಡಿ ಭದ್ರತಾ ಪಡೆಯ ತಂಡ ಶನಿವಾರ ವಶಕ್ಕೆ ತೆಗೆದುಕೊಂಡಿತು ಎಂದು ವಕ್ತಾರರು ತಿಳಿಸಿದ್ದಾರೆ.
ವಿಚಾರಣೆ ಸಂದರ್ಭ ಆತನಿಗೆ ಅಂತರರಾಷ್ಟ್ರೀಯ ಗಡಿ ಜೋಡಣೆಯ ಬಗ್ಗೆ ತಿಳಿದಿರಲಿಲ್ಲ; ಆದುದರಿಂದ ಆತ ಪ್ರಮಾದವಶಾತ್ ಭಾರತೀಯ ಭೂ ಭಾಗ ಪ್ರವೇಶಿಸಿದ್ದಾನೆ ಎಂದು ತಿಳಿದು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶೋಧ ಕಾರ್ಯಾಚರಣೆ ಸಂದರ್ಭ ಆತನಲ್ಲಿ ಯಾವುದೇ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನಿ ಪ್ರಜೆಗಳ ಅನಗತ್ಯ ಚಲನವಲನಕ್ಕೆ ನಿರ್ಬಂಧ ವಿಧಿಸುವ ಕುರಿತಂತೆ ಕಳವಳ ವ್ಯಕ್ತಪಡಿಸಲು ಪಾಕಿಸ್ತಾನದ ರೇಂಜರ್‌ಗಳೊಂದಿಗೆ ಧ್ವಜ ಮೆರವಣಿಗೆ ನಡೆಸಲಾಗಿತ್ತು ಎಂದು ಅವರು ಹೇಳಿದ್ದಾರೆ.