ಅಸ್ಸಾಂನಾದ್ಯಂತ ಕ್ರೈಸ್ತ ಶಾಲೆಗಳಿಗೆ ʼಅಂತಿಮ ಎಚ್ಚರಿಕೆʼ ನೀಡಿ ಪೋಸ್ಟರ್‌ ಅಂಟಿಸಿದ ಹಿಂದುತ್ವ ಸಂಘಟನೆ

Update: 2024-02-28 08:05 GMT

Photo courtesy: The Meghalayan

ಹೊಸದಿಲ್ಲಿ: ಅಸ್ಸಾಂನ ಶೈಕ್ಷಣಿಕ ಸಂಸ್ಥೆಗಳಲ್ಲಿ ಎಲ್ಲಾ ಧಾರ್ಮಿಕ ಚಿಹ್ನೆಗಳು ಮತ್ತು ಉಡುಪುಗಳನ್ನು ತಡೆಗಟ್ಟಬೇಕೆಂದು ಇತ್ತೀಚೆಗೆ ಹಿಂದುತ್ವ ಸಂಘಟನೆ ಸನ್ಮಿಲಿತ ಸನಾತನ್‌ ಸಮಾಜ್‌ ಕರೆ ನೀಡಿದ ಬೆನ್ನಿಗೇ ರಾಜ್ಯದ ಹಲವಾರು ಪ್ರಮುಖ ಕ್ರೈಸ್ತ ಸಂಸ್ಥೆಗಳ ಗೋಡೆಗಳಲ್ಲಿ ಪೋಸ್ಟರ್‌ಗಳು ಕಂಡು ಬಂದಿದ್ದು, ಶಾಲೆಗಳನ್ನು ಧಾರ್ಮಿಕ ಸಂಸ್ಥೆಗಳಾಗಿ ಬಳಸುವುದರ ವಿರುದ್ಧ ಈ ಪೋಸ್ಟರ್‌ಗಳಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು thewire.in ವರದಿ ಮಾಡಿದೆ.

ಅಸ್ಸಾಮಿ ಭಾಷೆಯಲ್ಲಿ ಬರೆಯಲಾಗಿರುವ ಪೋಸ್ಟರ್‌ನಲ್ಲಿ, “ಶಾಲೆಗಳನ್ನು ಧಾರ್ಮಿಕ ಸಂಸ್ಥೆಗಳಾಗಿ ಬಳಸುವುದನ್ನು ನಿಲ್ಲಿಸಲು ಇದು ಅಂತಿಮ ಎಚ್ಚರಿಕೆ… ಭಾರತ ವಿರೋಧಿ ಮತ್ತು ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸಿ, ಇಲ್ಲದೇ ಇದ್ದರೆ… ,” ಎಂದು ಬರೆಯಲಾಗಿದೆ.

ಶಾಲಾ ಆವರಣಗಳಿಂದ ಏಸು ಕ್ರಿಸ್ತ ಮತ್ತು ಮೇರಿ ಪ್ರತಿಮೆಗಳನ್ನು ಸೇರಿದಂತೆ ಚರ್ಚ್‌ಗಳನ್ನು ತೆಗೆದುಹಾಕುವಂತೆಯೂ ಅಲ್ಪಸಂಖ್ಯಾತ ಸಂಸ್ಥೆಗಳನ್ನು ಆಗ್ರಹಿಸಲಾಗಿದೆ.

“ಕ್ರೈಸ್ತ ಮಿಷನರಿ ಶಿಕ್ಷಣ ಸಂಸ್ಥೆಗಳು ಪ್ರಸ್ತಾವಿತ ಹೊಸ ಶಿಕ್ಷಣ ನೀತಿಯನ್ನು ಕಡೆಗಣಿಸುವುದನ್ನು ನಿಲ್ಲಿಸಬೇಕು ಮತ್ತು ಭಾರತದ ಸಂವಿಧಾನಕ್ಕೆ ಗೌರವ ತೋರಿಸಬೇಕು,” ಎಂದು ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ.

ಫೆಬ್ರವರಿ 18 ರಂದು ಜೊರ್ಹಟ್‌ನ ಖ್ಯಾತ ಕಾರ್ಮೆಲ್‌ ಸ್ಕೂಲ್‌ನ ಆಡಳಿತವು ಶಾಲಾ ಆವರಣದಲ್ಲಿ ಈ ಪೋಸ್ಟರ್‌ ನೋಡಿ ಪೊಲೀಸರಿಗೆ ಮಾಹಿತಿ ನೀಡಿತ್ತು. ತಮ್ಮ ಶಾಲೆ ಎಲ್ಲಾ ಧರ್ಮ ಮತ್ತು ಸಂಸ್ಕೃತಿಯನ್ನು ಮತ್ತು ಶಾಂತಿ ಸೌಹಾರ್ದತೆಯ ವಾತಾವರಣವನ್ನು ಬೆಂಬಲಿಸುತ್ತದೆ ಎಂದು ಪ್ರಾಂಶುಪಾಲೆ ಸಿಸ್ಟರ್‌ ರೋಸ್‌ ಫಾತಿಮಾ ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.

ನಂತರದ ದಿನಗಳಲ್ಲಿ ಡಾನ್‌ ಬಾಸ್ಕೋ ಬಾಯ್ಸ್‌ ಸ್ಕೂಲ್‌ ಮತ್ತು ಸೈಂಟ್‌ ಮೇರೀಸ್‌ ಸ್ಕೂಲ್‌ ಗುವಾಹಟಿ ಮತ್ತು ಬರ್ಪೇಟ, ದಿಬ್ರೂಘರ್‌ ಮತ್ತು ಶಿವಸಾಗರ್‌ ಪಟ್ಟಣಗಳ ಕ್ರೈಸ್ತ ಶಾಲೆಗಳಲ್ಲೂ ಇಂತಹ ಪೋಸ್ಟರ್‌ಗಳು ಕಾಣಿಸಿಕೊಂಡವು.

“ನಾವು ಕ್ರೈಸ್ತರ ವಿರುದ್ಧವಲ್ಲ. ಆದರೆ ಮತಾಂತರವನ್ನು ಗುರಿಯಾಗಿಸಿ ಧಾರ್ಮಿಕ ಚಿಹ್ನೆಗಳ ಬಳಕೆಯನ್ನು ವಿರೋಧಿಸುತ್ತೇವೆ. ಮಿಷನರಿ ಶಾಲೆಗಳು ಕ್ರೈಸ್ತ ಧರ್ಮವನ್ನು ಪ್ರಸಾರ ಮಾಡುತ್ತವೆ ಆದರೆ ಭಾರತ ಅಥವಾ ಭಾರತೀಯ ಸಂಸ್ಕೃತಿಯನ್ನಲ್ಲ ಎಂದು ಸನ್ಮಿಳಿತ ಸನಾನ ಸಮಾಜದ ಸದಸ್ಯರೊಬ್ಬರು ಹೇಳಿದ್ದಾರೆ.

ಈ ಪೋಸ್ಟರ್‌ ಅಭಿಯಾನವನ್ನು ಅಸ್ಸಾಂ ಕ್ರಿಶ್ಚಿಯನ್‌ ಫೋರಂ ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News