ಅದಾನಿ ಕಂಪನಿಯ 6000 ಕೆಜಿ ತೂಕದ ಕಬ್ಬಿಣದ ಸೇತುವೆ ಕಳ್ಳತನ!
ಮುಂಬೈ: ಅದಾನಿ ಕಂಪನಿಗೆ ಸೇರಿದ ಸುಮಾರು 6000 ಕೆ.ಜಿ. ತೂಕದ, 90 ಅಡಿ ಉದ್ದದ ಕಬ್ಬಿಣದ ಸೇತುವೆಯೊಂದು ಮುಂಬೈನ ಮಲಡ್ (ಪಶ್ಚಿಮ)ನಿಂದ ಕಳೆದ ತಿಂಗಳು ಕಳ್ಳತನವಾಗಿರುವ ಸ್ವಾರಸ್ಯಕರ ಪ್ರಸಂಗ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಇದೀಗ ಬಂಧಿಸಲಾಗಿದೆ.
ಈ ತಾತ್ಕಾಲಿಕ ಸೇತುವೆಯನ್ನು ಕಳೆದ ವರ್ಷದ ಜೂನ್ನಲ್ಲಿ ಅದಾನಿ ಎಲೆಕ್ಟ್ರಿಸಿಟಿಯ ದೊಡ್ಡ ಎಲೆಕ್ಟ್ರಿಕ್ ಕೇಬಲ್ಗಳನ್ನು ಸಾಗಿಸುವ ಸಲುವಾಗಿ ಚರಂಡಿಯೊಂದರ ಮೇಲೆ ಇರಿಸಲಾಗಿತ್ತು. ಕಳೆದ ಏಪ್ರಿಲ್ನಲ್ಲಿ ಈ ಚರಂಡಿಗೆ ಕಾಯಂ ಸೇತುವೆ ನಿರ್ಮಾಣವಾದ ಬಳಿಕ ಇದನ್ನು ಸಾಗಿಸಲಾಗಿತ್ತು. ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಹಳೆಯ ಸೇತುವೆಯನ್ನು ಕ್ರೇನ್ ಬಳಸಿ ತೆಗೆದು ಸಾಗಿಸಲಾಗಿತ್ತು.
ಈ ಸೇತುವೆ ನಾಪತ್ತೆಯಾಗಿರುವ ಬಗ್ಗೆ ಅದಾನಿ ಎಲೆಕ್ಟ್ರಿಸಿಟಿ ಪ್ರತಿನಿಧಿಗಳು ಪೊಲೀಸರಿಗೆ ದೂರು ನೀಡಿದ್ದರು. ಜೂನ್ 6ರ ಬಳಿಕ ಈ ಸೇತುವೆ ಕಂಡುಬಂದಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಜಾಗದ ಸುತ್ತ ಕಣ್ಗಾವಲು ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಪಕ್ಕದ ರಸ್ತೆಗಳಲ್ಲಿರುವ ಸಿಸಿ ಟಿವಿಯ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಜೂನ್ 11ರಂದು ಈ ಸೇತುವೆಯ ದಿಕ್ಕಿನಲ್ಲಿ ಚಲಿಸಿದ ದೊಡ್ಡ ವಾಹನ ಚಲಿಸುತ್ತಿದ್ದುದು ಕಂಡುಬಂದಿದೆ. ಇದರಲ್ಲಿ ಗ್ಯಾಸ್ ಕಟ್ಟರ್ ಮಿಷನ್ ಕೂಡಾ ಇತ್ತು. ಇದರ ಸಹಾಯದಿಂದ ಸೇತುವೆಯನ್ನು ಕತ್ತರಿಸಿ, ಅದಾನಿ ಎಲೆಕ್ಟ್ರಿಸಿಟಿಗೆ ಮಾಹಿತಿ ನೀಡದೇ ಸಾಗಿಸಿರಬೇಕು ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಲಾಗಿದ್ದು, ಈ ಪೈಕಿ ಒಬ್ಬ ಸೇತುವೆ ಅಳವಡಿಸಲು ಗುತ್ತಿಗೆ ಪಡೆದಿದ್ದ ಕಂಪನಿಯ ಸಿಬ್ಬಂದಿ ಎಂದು ಪೊಲೀಸರು ಹೇಳಿದ್ದಾರೆ. ಕದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅದಾನಿ ಎಲೆಕ್ಟ್ರಿಸಿಟಿ ಸಿಬ್ಬಂದಿ ತಿಳಿಸಿದ್ದಾರೆ.