ಅದಾನಿ-ಹಿಂಡೆನ್‌ಬರ್ಗ್ ಪ್ರಕರಣ | ಸಿಬಿಐಗೆ ಪ್ರಕರಣ ವರ್ಗಾವಣೆ ನಿರಾಕರಿಸಿದ್ದ ಜ.3ರ ತೀರ್ಪಿನ ಪುನರ್‌ಪರಿಶೀಲನೆ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ
ಹೊಸದಿಲ್ಲಿ : ಅದಾನಿ ಗ್ರೂಪ್‌ನಿಂದ ಶೇರುಗಳ ಬೆಲೆಗಳ ಕೃತಕ ಏರಿಕೆ ಆರೋಪಗಳ ಕುರಿತು ವಿಚಾರಣೆಯನ್ನು ವಿಶೇಷ ತನಿಖಾ ತಂಡ(ಸಿಟ್) ಅಥವಾ ಸಿಬಿಐಗೆ ವರ್ಗಾಯಿಸಲು ನಿರಾಕರಿಸಿದ್ದ ತನ್ನ ಜ.3ರ ತೀರ್ಪಿನ ಪುನರ್‌ಪರಿಶೀಲನೆಯನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ.
ಜ.3ರ ತೀರ್ಪಿನ ವಿರುದ್ಧ ಪಿಐಎಲ್ ಅರ್ಜಿದಾರರ ಪೈಕಿ ಅನಾಮಿಕಾ ಜೈಸ್ವಾಲ್ ಸಲ್ಲಿಸಿದ್ದ ಪುನರ್‌ಪರಿಶೀಲನಾ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ವಜಾಗೊಳಿಸಿತು. ಅದಾನಿ ಗ್ರೂಪ್‌ಗೆ ಮಹತ್ವದ ಗೆಲುವಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಜ.3ರಂದು ಸಿಬಿಐ ಅಥವಾ ಸಿಟ್ ತನಿಖೆಗೆ ಆದೇಶಿಸಲು ನಿರಾಕರಿಸಿತ್ತು. ಸೆಬಿ ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದೆ ಮತ್ತು ಅದರ ನಡವಳಿಕೆ ವಿಶ್ವಾಸಾರ್ಹವಾಗಿದೆ ಎಂದು ಅದು ತನ್ನ ತೀರ್ಪಿನಲ್ಲಿ ಹೇಳಿತ್ತು.
ತೀರ್ಪಿನಲ್ಲಿ ‘ತಪ್ಪುಗಳು ಮತ್ತು ದೋಷಗಳಿವೆ ’ಎಂದು ಪ್ರತಿಪಾದಿಸಿದ್ದ ಪುನರ್‌ಪರಿಶೀಲನಾ ಅರ್ಜಿಯು, ಅರ್ಜಿದಾರರ ವಕೀಲರು ಹೊಸ ಮಾಹಿತಿಗಳನ್ನು ಸ್ವೀಕರಿಸಿರುವ ಹಿನ್ನೆಲೆಯಲ್ಲಿ ತೀರ್ಪಿನ ಪುನರ್‌ಪರಿಶೀಲನೆಗೆ ಸಾಕಷ್ಟು ಕಾರಣಗಳಿವೆ ಎಂದು ಹೇಳಿತ್ತು.
ಸೆಬಿ ಆರೋಪಗಳ ಬಳಿಕ ತಾನು ಕೈಗೆತ್ತಿಕೊಂಡಿದ್ದ 24 ತನಿಖೆಗಳ ಸ್ಥಿತಿಗತಿಯನ್ನು, ಅವು ಪೂರ್ಣಗೊಂಡಿವೆಯೇ ಅಥವಾ ಅಪೂರ್ಣವಾಗಿವೆಯೇ ಎಂಬ ಬಗ್ಗೆ ಮಾಹಿತಿಯನ್ನು ಮಾತ್ರ ತನ್ನ ವರದಿಯಲ್ಲಿ ನವೀಕರಿಸಿತ್ತು. ಆದರೆ ತನಿಖೆಯಲ್ಲಿ ತಾನು ಕಂಡುಕೊಂಡ ಯಾವುದೇ ಅಂಶಗಳು ಅಥವಾ ತೆಗೆದುಕೊಂಡ ಕ್ರಮಗಳ ವಿವರಗಳನ್ನು ಬಹಿರಂಗಗೊಳಿಸಿರಲಿಲ್ಲ ಎಂದು ಅರ್ಜಿಯು ತಿಳಿಸಿತ್ತು.