ಚಲಾಯಿತ ಮತಗಳ ನಿಖರ ಸಂಖ್ಯೆ ಪ್ರಕಟಿಸಲು ಆಗ್ರಹಿಸಿ ಸುಪ್ರೀಂಕೋರ್ಟ್ ಗೆ ಎಡಿಆರ್ ಮನವಿ

Update: 2024-05-10 16:39 GMT

ಸುಪ್ರೀಂಕೋರ್ಟ್ | PC : PTI 

ಹೊಸದಿಲ್ಲಿ : ಹಾಲಿ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ನಿಖರ ಸಂಖ್ಯೆಯನ್ನು ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಪ್ರಜಾತಾಂತ್ರಿಕ ಸುಧಾರಣೆಗಳ ಅಸೋಸಿಯೇಶನ್ ( ಎಡಿಆರ್) ಶುಕ್ರವಾರ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಗಳಲ್ಲಿ ಭಾರತೀಯ ಚುನಾವಣಾ ಆಯೋಗವು ಹಲವಾರು ದಿನಗಳ ಬಳಿಕ ಮತದಾನದ ದತ್ತಾಂಶಗಳನ್ನು ಬಹಿರಂಗಪಡಿಸುತ್ತದೆ. ಎಪ್ರಿಲ್ 19ರಂದು ನಡೆದ ಮೊದಲ ಹಂತದ ಮತದಾನದ ಕುರಿತ ಅಂತಿಮ ದತ್ತಾಂಶಗಳನ್ನು 11 ದಿನಗಳ ಬಳಿಕ ಪ್ರಕಟಿಸಲಾಯಿತು ಹಾಗೂ ಎರಡನೆ ಹಂತದ ಮತದಾನದ ಕುರಿತ ಅಂತಿಮ ದತ್ತಾಂಶಗಳನ್ನು ನಾಲ್ಕು ದಿನಗಳ ಆನಂತರ ಎಪ್ರಿಲ್ 26ರಂದು ಪ್ರಕಟಿಸಲಾಗಿತ್ತು. ಮತದಾನದ ದಿನದಂದು ಬಿಡುಗಡೆಯಾದ ಚಲಾಯಿತ ಮತಗಳ ಕುರಿತ ಆರಂಭಿಕ ಹಂತದ ದತ್ತಾಂಶಕ್ಕೂ, ಅಂತಿಮ ದತ್ತಾಂಶ್ಕೂ ಶೇ.5ರಷ್ಟು ವ್ಯತ್ಯಾಸವಿರುವ ಬಗ್ಗೆ ಎಡಿಆರ್ ಸರ್ವೋಚ್ಚ ನ್ಯಾಯಾಲಯದ ಗಮನಸೆಳೆದಿದೆ.

ಚಲಾವಣೆಯದ ಮತಗಳ ನಿಖರ ಸಂಖ್ಯೆಯನ್ನು ಬಿಡುಗಡೆಗೊಳಿಸಲು ಭಾರತೀಯ ಚುನಾವಣಾ ಆಯೋಗವು ನಿರಾಕರಿಸುತ್ತಿರುವುದು, ಇದರ ಜೊತೆಗೆ ಚಲಾವಣೆಯಾದ ಮತಗಳ ದತ್ತಾಂಶಗಳನ್ನು ಪ್ರಕಟಿಸುವಲ್ಲಿ ವಿನಾಕಾರಣ ವಿಳಂಬಿಸುತ್ತಿರುವುದು, ಇವೆಲ್ಲಾ ಮೊದಲ ಹಾಗೂ ಎರಡನೆ ಹಂತದ ಮತದಾನದಲ್ಲಿ ಚಲಾಯಿತ ಮತಗಳ ಕುರಿತ ಪ್ರಾಥಮಿಕ ದತ್ತಾಂಶಕ್ಕೂ, 30.04.2024ರಂದು ಬಿಡುಗಡೆಯಾದ ದತ್ತಾಂಶಕ್ಕೂ ತೀವ್ರ ಏರಿಕೆಯಾಗಿರುವ ಬಗ್ಗೆ ಮತದಾರರ ಮನದಲ್ಲಿ ಆತಂಕಗಳನ್ನು ಸೃಷ್ಟಿಸಿದೆ.

2019ರ ಸಾರ್ವತ್ರಿಕ ಚುನಾವಣೆಗಳ ಮತದಾನದ ದತ್ತಾಂಶಗಳಲ್ಲಿ ವ್ಯತ್ಯಾಸಗಳು ಕಂಡುಬಂದಿರುವುದಾಗಿ ಆರೋಪಿಸಿ ಎಡಿಆರ್ 2019ರಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂವಾದಾತ್ಮಕವಾಗಿ ಸಲ್ಲಿಸಿದ ಅರ್ಜಿಯಲ್ಲಿ ಈ ವಿಷಯವನ್ನು ತಿಳಿಸಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಹಂತದಲ್ಲೂ ಮತದಾನ ಮುಕ್ತಾಯವಾದ ಬಳಿಕ ಎಲ್ಲಾ ಮತಗಳಟ್ಟೆಗಳಲ್ಲಿ ದಾಖಲಾದ ಮತಗಳ ವಿವರಗಳನ್ನು ಫಾರ್ಮ್ 17 ಸಿ ಭಾಗ-1ರಲ್ಲಿ ನಮೂದಿಸಿ, ಅವುಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ತಕ್ಷಣವೇ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕೆಂದು ಸಂವಾದಾತ್ಮಕ ಅರ್ಜಿಯಲ್ಲಿ ಆಗ್ರಹಿಸಲಾಗಿದೆ.

ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನು ಸಂಕಲನಗೊಳಿಸಿದ ಬಳಿಕ ಅಭ್ಯರ್ಥಿವಾರು ಫಲಿತಾಂಶಗಳನ್ನು ಒಳಗೊಂಡ ಫಾಮ್ 17ಸಿ ಭಾಗ-II ರಲ್ಲಿ ನಮೂದಿಸಿ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಚುನಾಣಾ ಆಯೋಗದ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News