ಶಾಲಾ ಬಾಲಕನಿಗೆ ಚೂರಿ ಇರಿತ ಪ್ರಕರಣದ ಬೆನ್ನಲ್ಲೇ ಶಾಲಾ ಬ್ಯಾಗ್ ಗಳ ತಪಾಸಣೆ ನಡೆಸುವಂತೆ ಶಿಕ್ಷಕರಿಗೆ ಸೂಚನೆ
ಉದಯ್ ಪುರ್: ಚೂರಿ ಇರಿತ ಪ್ರಕರಣ ನಡೆದ ನಂತರ, ದಕ್ಷಿಣ ರಾಜಸ್ಥಾನದಲ್ಲಿ ಕೋಮು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಈ ನಡುವೆ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಗಳಲ್ಲಿ ಹರಿತ ವಸ್ತುಗಳಿಗಾಗಿ ತಪಾಸಣೆ ನಡೆಸುವಂತೆ ಶಾಲಾ ಶಿಕ್ಷಕರಿಗೆ ರಾಜಸ್ಥಾನ ಸರಕಾರ ಸೂಚಿಸಿದೆ.
ಚಾಕು ಇರಿತ ಪ್ರಕರಣ ನಡೆದ ನಂತರ, ರಾಜಸ್ಥಾನ ಶಿಕ್ಷಣ ಇಲಾಖೆಯು ಶಾಲೆಗೆ ಚಾಕುಗಳು ಹಾಗೂ ಕತ್ತರಿಗಳಂತಹ ಹರಿತ ವಸ್ತುಗಳನ್ನು ತರುವುದಕ್ಕೆ ನಿಷೇಧ ಹೇರಿದೆ. ಈ ನಿಷೇಧದನ್ವಯ, ಇನ್ನು ಮುಂದೆ ಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹಾಗೂ ಡೆಸ್ಕ್ ಗಳಲ್ಲಿ ಯಾವುದೇ ವಿಷಕಾರಿ ಅಥವಾ ಹರಿತ ವಸ್ತುಗಳು ಇರದಿರುವುದನ್ನು ಖಾತರಿಪಡಿಸಲು, ಅವರ ಶಾಲಾ ಬ್ಯಾಗ್ ಗಳ ತಪಾಸಣೆ ನಡೆಸಬೇಕಿದೆ. ಅಲ್ಲದೆ ವಿದ್ಯಾರ್ಥಿಗಳ ಪೋಷಕರು ಸದಾ ತಮ್ಮ ಮಕ್ಕಳ ಮೇಲೆ ನಿಗಾ ವಹಿಸಿರಬೇಕು ಹಾಗೂ ನಿಯಮಿತವಾಗಿ ಅವರ ಶಾಲಾ ಬ್ಯಾಗ್ ಗಳ ತಪಾಸಣೆ ನಡೆಸಬೇಕು ಎಂದೂ ಸೂಚಿಸಲಾಗಿದೆ.
ಶಾಲಾ ಬಾಲಕನೊಬ್ಬನಿಗೆ ಸಹಪಾಠಿಯೊಬ್ಬ ಚೂರಿಯಿಂದ ಇರಿದ ನಂತರ, ದಕ್ಷಿಣ ರಾಜಸ್ಥಾನದಲ್ಲಿ ಕೋಮು ಪ್ರಕ್ಷುಬ್ಧತೆ ಕಾಣಿಸಿಕೊಂಡಿದ್ದು, ವ್ಯಾಪಕ ಪ್ರತಿಭಟನೆಗಳು, ಘರ್ಷಣೆಗಳು ಹಾಗೂ ಆಯುಧಗಳಿಂದ ಹಲ್ಲೆಗಳು ನಡೆಯುತ್ತಿವೆ.
ಈ ನಡುವೆ, ಚೂರಿ ಇರಿತದಿಂದ ಗಾಯಗೊಂಡಿರುವ ಬಾಲಕನ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.