ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕ್ಯಾಬಿನ್ ಸಿಬ್ಬಂದಿಗಳ ಮುಷ್ಕರ ಅಂತ್ಯ
ಹೊಸ ದಿಲ್ಲಿ: ಕ್ಯಾಬಿನ್ ಸಿಬ್ಬಂದಿಗಳ ಕೊರತೆಯಿಂದ ವಿಮಾನಯಾನದಲ್ಲಿನ ಅಡಚಣೆ ಗುರುವಾರವೂ ಮುಂದುವರಿದಿದ್ದು, ಈ ನಡುವೆ 25ಕ್ಕೆ ಹೆಚ್ಚು ಉದ್ಯೋಗಿಗಳಿಗೆ ವಿತರಿಸಲಾಗಿದ್ದ ವಜಾ ಪತ್ರಗಳನ್ನು ಹಿಂಪಡೆಲು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಒಪ್ಪಿಗೆ ಸೂಚಿಸಿದೆ. ಇದೇ ವೇಳೆ, ತಮ್ಮ ಸಮಸ್ಯೆಗಳ ಕುರಿತು ಗಮನಿಸಲಾಗುವುದು ಎಂದು ವಿಮಾನ ಯಾನ ಸಂಸ್ಥೆಯ ಆಡಳಿತ ಮಂಡಳಿಯು ಭರವಸೆ ನೀಡಿರುವುದರಿಂದ ಪ್ರತಿಭಟನಾನಿರತರಾಗಿದ್ದ ಕ್ಯಾಬಿನ್ ಸಿಬ್ಬಂದಿಗಳು ತಮ್ಮ ಮುಷ್ಕರವನ್ನು ಹಿಂಪಡೆದಿದ್ದಾರೆ.
ಇಂದು ಬೆಳಗ್ಗೆ ಹೊಸ ದಿಲ್ಲಿಯ ಮುಖ್ಯ ಕಾರ್ಮಿಕ ಆಯುಕ್ತರು (ಕೇಂದ್ರ) ಕಚೇರಿಯಲ್ಲಿ ನಡೆದ ಕ್ಯಾಬಿನ್ ಸಿಬ್ಬಂದಿಗಳ ಪ್ರತಿನಿಧಿಗಳು ಹಾಗೂ ವಿಮಾನಯಾನ ಸಂಸ್ಥೆಯ ಪ್ರತಿನಿಧಿಗಳ ನಡುವಿನ ಸಮಾಲೋಚನಾ ಸಭೆಯ ನಂತರ ಈ ನಿರ್ಧಾರ ಹೊರ ಬಿದ್ದಿದೆ.
PTI ಸುದ್ದಿ ಸಂಸ್ಥೆಯ ಪ್ರಕಾರ, ತೀವ್ರ ಸ್ವರೂಪದ ಬಿಕ್ಕಟ್ಟಿನ ಕಾರಣಕ್ಕೆ ಮಂಗಳವಾರ ರಾತ್ರಿಯಿಂದ ಇದುವರೆಗೆ ಟಾಟಾ ಸಮೂಹ ಒಡೆತನದ ವಿಮಾನ ಯಾನ ಸಂಸ್ಥೆಯು 170 ವಿಮಾನಗಳ ಪ್ರಯಾಣವನ್ನು ರದ್ದುಗೊಳಿಸಿದೆ ಎಂದು ಹೇಳಲಾಗಿದೆ.
ಬುಧವಾರ ನೂರಕ್ಕೂ ಹೆಚ್ಚು ಹಿರಿಯ ಕ್ಯಾಬಿನ್ ಸಿಬ್ಬಂದಿಗಳು ಸಾಮೂಹಿಕ ಅನಾರೋಗ್ಯ ರಜೆ ಹಾಕಿದ್ದರಿಂದ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ಸುಮಾರು 25 ಮಂದಿ ಕ್ಯಾಬಿನ್ ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಿತ್ತು. ಇನ್ನಿತರ ಕ್ಯಾಬಿನ್ ಸಿಬ್ಬಂದಿಗಳು ತಮ್ಮ ಕರ್ತವ್ಯಕ್ಕೆ ಮರಳಲು ಗುರುವಾರ ಸಂಜೆ 4 ಗಂಟೆಯವರೆಗೆ ಗಡುವು ನೀಡಿತ್ತು.