ಜ್ವಾಲಾಮುಖಿ ಸ್ಪೋಟ : ಬಾಲಿಗೆ ಏರ್‌ಇಂಡಿಯಾ, ಇಂಡಿಗೋ ವಿಮಾನಗಳ ಹಾರಾಟ ರದ್ದು

Update: 2024-11-13 16:19 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಇಂಡೊನೇಶ್ಯದ ಬಾಲಿದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ ಪ್ರದೇಶಾದ್ಯಂತ ಆಕಾಶದೆತ್ತರಕ್ಕೆ ದಟ್ಟ ಹೊಗೆ ಆವರಿಸಿರುವ ಹಿನ್ನೆಲೆಯಲ್ಲಿ ಭಾರತೀಯ ವಾಯುಯಾನ ಸಂಸ್ಥೆಗಳಾದ ಏರ್ ಇಂಡಿಯಾ ಹಾಗೂ ಇಂಡಿಗೋ, ಬುಧವಾರ ಅಲ್ಲಿಗೆ ತಮ್ಮ ವಿಮಾನಗಳ ಹಾರಾಟವನ್ನು ರದ್ದುಪಡಿಸಿವೆ.

ಪೂರ್ವ ನುಸಾ ಟೆಂಗಾರಾ ಪ್ರಾಂತದ ದುರ್ಗಮ ದ್ವೀಪವೊಂದರಲ್ಲಿರುವ ಲೆವೊಟೊಬಿ ಲಾಕಿಲಾಕಿ ಪರ್ವತದಲ್ಲಿ ಈ ತಿಂಗಳ ಆರಂಭದಲ್ಲಿ ಜಾಲ್ವಾಮುಖಿ ಸ್ಫೋಟಿಸಿತ್ತು. ಇದರಪರಿಣಾಮ ಧೂಳಿನಿಂದ ತುಂಬಿದ ಹೊಗೆ ಕಾರ್ಮೋಡಗಳು ಪ್ರದೇಶದಲ್ಲಿಡೀ ಹರಡಿವೆ. ಈ ಹೊಗೆಮೋಡಗಳು ವಿಮಾನಗಳ ಹಾರಾಟಕ್ಕೆ ಅಪಾಯಕರವಾಗಿರುವುದರಿಂದ, ಹಲವಾರು ವಿಮಾನಗಳು ಬಾಲಿಗೆ ತಮ್ಮ ಸಂಚಾರವನ್ನು ರದ್ದುಪಡಿಸಿವೆ.

ಏರ್‌ ಇಂಡಿಯಾ ಹಾಗೂ ಇಂಡಿಗೋ ವಾಯುಯಾನಸಂಸ್ಥೆಗಳು ಕ್ರಮವಾಗಿ ಹೊಸದಿಲ್ಲಿ ಹಾಗೂ ಬೆಂಗಳೂರಿನಿಂದ ಬಾಲಿಗೆ ದಿನಂಪ್ರತಿ ವಿಮಾನ ಹಾರಾಟಗಳನ್ನು ನಡೆಸುತ್ತವೆ. ಈ ಮಧ್ಯೆ ಬಾಲಿಯಲ್ಲಿ ಸಿಲುಕಿರುವ ಭಾರತೀಯ ಪ್ರಯಾಣಿಕರಿಗೆ ನೆರವಾಗುವಂತೆ ಕೋರಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ನಾಗರಿಕ ವಾಯುಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರಿಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ನಾಯ್ಡು ಅವರು ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರುವ ಕುರಿತು ಏರ್‌ಇಂಡಿಯಾ ಜೊತೆ ತನ್ನ ಸಚಿವಾಲಯ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News