ಬಂಡಾಯ ಎದ್ದು 2 ವಾರ ನಂತರ ಶರದ್ ಪವಾರ್ ಭೇಟಿಯಾದ ಅಜಿತ್ ಪವಾರ್ ಬಣ

Update: 2023-07-16 09:37 GMT

ಮುಂಬೈ: ಬಂಡಾಯ ಎದ್ದು ಸರಿಯಾಗಿ ಎರಡು ವಾರಗಳ ನಂತರ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಬಣವು ಇಂದು ವೈ.ಬಿ. ಚವಾಣ್ ಸೆಂಟರ್ ನಲ್ಲಿ ಶರದ್ ಪವಾರ್ ಅವರನ್ನು ದಿಢೀರ್ ಭೇಟಿ ಆಗಿ ಅವರ "ಆಶೀರ್ವಾದ" ಕೋರಿದೆ, ಇದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ) ಸಂಸ್ಥಾಪಕರನ್ನು ಸಮಾಧಾನಪಡಿಸುವ ಪ್ರಯತ್ನವಾಗಿ ಕಂಡುಬಂದಿದೆ.

ದಿಢೀರ್ ರಾಜ್ಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಜುಲೈ 2 ರಂದು, ಅಜಿತ್ ಪವಾರ್ ಹಾಗೂ ಎಂಟು ಎನ್ ಸಿಪಿ ಶಾಸಕರು ಮಹಾರಾಷ್ಟ್ರ ಸರಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಅಚ್ಚರಿಯ ನಡೆ ಶರದ್ ಪವಾರ್ ನೇತೃತ್ವದ ಪಕ್ಷದಲ್ಲಿ ವಿಭಜನೆಗೆ ಕಾರಣವಾಯಿತು.

"ನಾವೆಲ್ಲರೂ ದೇವರಿಗೆ ಸಮಾನರಾದ ಶರದ್ ಪವಾರ್ ಅವರ ಆಶೀರ್ವಾದ ಪಡೆಯಲು ಬಂದಿದ್ದೇವೆ. ಪವಾರ್ ಸಾಹೇಬ್ ಇಲ್ಲಿದ್ದಾರೆ ಎಂದು ನಮಗೆ ತಿಳಿದಿತ್ತು. ಆದ್ದರಿಂದ ನಾವು ಅವರ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇವೆ" ಎಂದು ಹಿರಿಯ ನಾಯಕ ಪ್ರಫುಲ್ ಪಟೇಲ್ ಹೇಳಿದರು.

"ಎನ್ ಸಿಪಿಯನ್ನು ಮತ್ತೆ ಒಟ್ಟಿಗೆ ತರುವ ನಿರ್ಧಾರವನ್ನು ತೆಗೆದುಕೊಳ್ಳುವಂತೆ ನಾವು ಶರದ್ ಪವಾರ್ ಅವರನ್ನು ವಿನಂತಿಸಿದ್ದೇವೆ. ಆದರೆ ಅವರು ಪ್ರತಿಕ್ರಿಯಿಸಲಿಲ್ಲ" ಎಂದು ಪಟೇಲ್ ಒಂದು ಗಂಟೆಯ ಸಭೆಯ ನಂತರ ಹೇಳಿದರು.

ಅಜಿತ್ ಪವಾರ್ ತನ್ನ ಚಿಕ್ಕಪ್ಪನ ವಿರುದ್ಧ ಬಂಡಾಯವೆದ್ದು ಜುಲೈ 2 ರಂದು ಏಕನಾಥ್ ಶಿಂಧೆ ನೇತೃತ್ವದ ಸರಕಾರಕ್ಕೆ ಸೇರಿದ ನಂತರ ಶರದ್ ಪವಾರ್ ಮತ್ತು ಬಂಡಾಯ ಎನ್ ಸಿಪಿ ಶಾಸಕರ ನಡುವಿನ ಮೊದಲ ಸಭೆ ಇದಾಗಿದೆ. ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನ ಆರಂಭವಾಗುವ ಒಂದು ದಿನದ ಮೊದಲು ಈ ಸಭೆ ನಡೆದಿದೆ.

ಪ್ರಫುಲ್ ಪಟೇಲ್ ಹಾಗೂ ಸುನೀಲ್ ತಾಟ್ಕರೆ ಜೊತೆಗೆ ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ಒಂಬತ್ತು ಶಾಸಕರು ಸಭೆಯಲ್ಲಿ ಉಪಸ್ಥಿತರಿದ್ದರು. ಶರದ್ ಪವಾರ್ ಬಣದ ಸುಪ್ರಿಯಾ ಸುಳೆ, ಜಯಂತ್ ಪಾಟೀಲ್ ಹಾಗೂ ಜಿತೇಂದ್ರ ಅವ್ಹಾದ್ ಉಪಸ್ಥಿತರಿದ್ದರು.

ಇತ್ತೀಚೆಗೆ, ಅಜಿತ್ ಪವಾರ್ ಅವರು ಎನ್ ಸಿಪಿ ಮುಖ್ಯಸ್ಥರ ಅಧಿಕೃತ ನಿವಾಸ ಸಿಲ್ವರ್ ಓಕ್ ಗೆ ಭೇಟಿ ನೀಡಿ, ಪವಾರ್ ಪತ್ನಿ ಪ್ರತಿಭಾ ಪವಾರ್ ಅವರನ್ನು ಭೇಟಿಯಾದರು, ಅವರು ಮುಂಬೈನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News