ನಾಳೆ ಪ್ರಧಾನಿ ಪರವಾಗಿ ಅಜ್ಮೀರ್ ಶರೀಫ್ ದರ್ಗಾಕ್ಕೆ ಚಾದರ್ ಅರ್ಪಣೆ
ಜೈಪುರ : ಕೇಂದ್ರ ಅಲ್ಪಸಂಖ್ಯಾತ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಅವರು ಶನಿವಾರ,ಜ.4ರಂದು ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಅಜ್ಮೀರ್‌ನ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಕ್ಕೆ ಚಾದರ್ ಅರ್ಪಿಸಲಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೂಫಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಅಜ್ಮೀರ್ ದರ್ಗಾದ ಗದ್ದೀ ನಶೀನ್ ಆಗಿರುವ ಹಾಜಿ ಸೈಯದ್ ಸಲ್ಮಾನ್ ಚಿಸ್ತಿ ಅವರು,ಮೋದಿಯವರು ಕಳೆದ 10 ವರ್ಷಗಳಿಂದಲೂ ಅಜ್ಮೀರ್ ದರ್ಗಾಕ್ಕೆ ಚಾದರ್‌ನ್ನು ಕಳುಹಿಸುತ್ತಿದ್ದಾರೆ ಎಂದು ತಿಳಿಸಿದರು.
ಚಂದ್ರದರ್ಶನದೊಂದಿಗೆ ಅಜ್ಮೀರ್‌ನಲ್ಲಿ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ಅವರ 813ನೇ ಉರೂಸ್ ಬುಧವಾರ ಆರಂಭಗೊಂಡಿದೆ. ಜ.4ರಂದು ಗರೀಬ್ ನವಾಝ್ ಅವರ ವಾರ್ಷಿಕ ಉರೂಸ್ ಅಂಗವಾಗಿ ಪ್ರಧಾನಿ ಮೋದಿಯವರು ಪವಿತ್ರ ಚಾದರ್‌ನ್ನು ಅರ್ಪಿಸಲಿದ್ದಾರೆ. ಕೇಂದ್ರ ಸಚಿವ ಕಿರಣ ರಿಜಿಜು ಅವರು ಪ್ರಧಾನಿ ಪರವಾಗಿ ಅಜ್ಮೀರ್‌ಗೆ ಚಾದರ್ ತಲುಪಿಸಲಿದ್ದಾರೆ ಎಂದು ಹೇಳಿದರು.
ಉರೂಸ್ ಪ್ರಾರಂಭವನ್ನು ಪ್ರಕಟಿಸಿದ ಚಿಸ್ತಿ,ಪಾಲ್ಗೊಂಡ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ಮೋದಿಯವರು ಕಳೆದ ಹತ್ತು ವರ್ಷಗಳಿಂದಲೂ ದರ್ಗಾಕ್ಕೆ ಚಾದರ್ ಕಳುಹಿಸುತ್ತಿದ್ದು,1947ರಲ್ಲಿ ಆರಂಭಗೊಂಡಿದ್ದ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಚಾದರ್ ಜೊತೆಗೆ ಪ್ರಧಾನಿ ದೇಶಕ್ಕಾಗಿ ಶಾಂತಿ ಮತ್ತು ಭ್ರಾತೃತ್ವದ ಸಂದೇಶವನ್ನೂ ರವಾನಿಸಲಿದ್ದು,ಏಕತೆ ಮತ್ತು ಸಾಮರಸ್ಯಕ್ಕಾಗಿ ಪ್ರಾರ್ಥನೆಗಳನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.
ರಾಜಸ್ಥಾನದ ಅಜ್ಮೀರ್‌ನಲ್ಲಿ ಚಂದ್ರದರ್ಶನದೊಂದಿಗೆ ಖ್ವಾಜಾ ಗರೀಬ್ ನವಾಝ್‌ರ ವಾರ್ಷಿಕ ಉರೂಸ್ ಆರಂಭಗೊಂಡಿದೆ.
ಇದರೊಂದಿಗೆ ವರ್ಷಕ್ಕೆ ಕೇವಲ ನಾಲ್ಕು ಸಲ ತೆರೆಯಲಾಗುವ ಜನ್ನತಿ ದರವಾಜಾವನ್ನೂ ತೆರೆಯಲಾಗಿದೆ. ಅದು ಮುಂದಿನ ಆರು ದಿನಗಳ ಕಾಲ ತೆರೆದಿರಲಿದೆ. ಪ್ರಚಲಿತ ನಂಬಿಕೆಯ ಪ್ರಕಾರ ಜನ್ನತಿ ದರವಾಜಾ ಮೂಲಕ ಪ್ರವೇಶಿಸುವುದು ಸ್ವರ್ಗದಲ್ಲಿ ಸ್ಥಾನವನ್ನು ಕಲ್ಪಿಸುತ್ತದೆ. ಹೀಗಾಗಿ ಭಾರೀ ಸಂಖ್ಯೆಯಲ್ಲಿ ಯಾತ್ರಿಗಳು ದರ್ಗಾಕ್ಕೆ ಭೇಟಿ ನೀಡುತ್ತಾರೆ ಮತ್ತು ಈ ಪವಿತ್ರ ದ್ವಾರದ ಮೂಲಕ ಹಾದು ಹೋಗುತ್ತಾರೆ ಎಂದು ದರ್ಗಾದ ಧರ್ಮಗುರು ಸೈಯದ್ ಮುನಾವರ್ ಚಿಸ್ತಿ ತಿಳಿಸಿದರು.