ಮಾಯಾವತಿ ಉತ್ತರಾಧಿಕಾರಿಯಾಗಿ ಆಕಾಶ್ ಆನಂದ್
ಲಕ್ನೋ: 2024ರ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಬಿಎಸ್ಪಿ ನಾಯಕಿ ಮಾಯಾವತಿ ಅವರು, ತನ್ನ ಸೋದರಳಿಯ ಆಕಾಶ್ ಆನಂದ್ ಅವರನ್ನು ತನ್ನ ಉತ್ತರಾಧಿಕಾರಿಯಾಗಿ ಘೋಷಿಸಿದ್ದಾರೆ.
ಶಹಜಾನ್ಪುರ ಜಿಲ್ಲಾ ಘಟಕದ ವರಿಷ್ಠರಾದ ಉದಯವೀರ್ ಸಿಂಗ್ ರವಿವಾರ ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡುತ್ತಾ, ‘‘ ಆಕಾಶ್ ಆನಂದ್ ಅವರನ್ನು ಮಾಯಾವತಿಜೀ ಅವರು ಉತ್ತರಾಧಿಕಾರಿಯಾಗಿ ಘೋಷಿಸಿದ್ದಾರೆ’’ ಎಂದು ಹೇಳಿದರು.
ಲಕ್ನೋದಲ್ಲಿ ರವಿವಾರ ಬಿಎಸ್ಪಿಯ ಉನ್ನತ ಮಟ್ಟದ ಸಭೆ ನಡೆಯಿತು. ಉತ್ತರಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳನ್ನು ಹೊರತುಪಡಿಸಿ ಸಮಗ್ರ ಭಾರತದಲ್ಲಿ ಪಕ್ಷದ ಹೊಣೆಗಾರಿಕೆಯನ್ನು ಆನಂದ್ ಅವರಿಗೆ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅಧಿಕೃಚ ಮೂಲಗಳು ತಿಳಿಸಿವೆ.
ಲಂಡನ್ ನಲ್ಲಿ ಎಂಬಿಎ ಶಿಕ್ಷಣ ಪಡೆದಿರುವ, ಆಕಾಶ್ 2017ರ ಫೆಬ್ರವರಿಯಲ್ಲಿ ಮೀರತ್ ನಲ್ಲಿ ನಡೆದ ಬಿಬಿಸ್ಪಿ ಪಕ್ಷದ ರ‍್ಯಾಲಿಯಲ್ಲಿ ಮಾಯಾವತಿ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದರು. ಆನಂದ್ ಅವರನ್ನು ಬಿಎಸ್ಪಿಯ ತಾರಾ ಪ್ರಚಾರಕರಾಗಿಯೂ ಘೋಷಿಸಲಾಗಿತ್ತು.
2019ರಲ್ಲಿ ಲೋಕಸಭಾ ಚುನಾವಣೆಯ ವೇಳೆ ನೀತಿ ಸಂಹಿತೆ ಉಲ್ಲಂಘನೆಗಾಗಿ ಚುನಾವಣಾ ಆಯೋಗವು ಬಿಎಸ್ಪಿ ನಾಯಕಿ ಮಾಯಾವತಿ ಅವರಿಗೆ ಚುನಾವಣಾ ಪ್ರಚಾರ ನಡೆಸುವುದಕ್ಕೆ 48 ತಾಸುಗಳ ನಿಷೇಧ ವಿಧಿಸಿದಾಗ, ಆಕಾಶ್ ಆನಂದ್ ಅವರು ಆಗ್ರಾದಲ್ಲಿ ನಡೆದ ಘಟಬಂಧನ್ ರ‍್ಯಾಲಿಯಲ್ಲಿ ಭಾಷಣ ಮಾಡಿದ್ದರು.
ಯುವ ಮತದಾರರನ್ನು ಪಕ್ಷದೆಡೆಗೆ ಸೆಳೆಯುವ ನಿಟ್ಟಿನಲ್ಲಿ ಮಾಯಾವತಿ ಕೈಗೊಂಡಿರುವ ವಿಸ್ತೃತವಾದ ನೀತಿಯ ಭಾಗವಾಗಿ ಆನಂದ್ ಅವರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.