ಆಲ್ ಇಂಗ್ಲೆಂಡ್ ಚಾಂಪಿಯನ್‌ ಶಿಪ್ | ಮಾಜಿ ಚಾಂಪಿಯನ್ ಲೀ ವಿರುದ್ಧ ಜಯ : ಲಕ್ಷ್ಯ ಸೇನ್ ಸೆಮಿ ಫೈನಲ್‌ ಗೆ

Update: 2024-03-16 15:33 GMT

ಲಕ್ಷ್ಯ ಸೇನ್ ಆಲ್ | Photo: NDTV 

ಬರ್ಮಿಂಗ್ ಹ್ಯಾಮ್: ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಲಕ್ಷ್ಯ ಸೇನ್ ಆಲ್ ಇಂಗ್ಲೆಂಡ್ ಚಾಂಪಿಯನ್‌ ಶಿಪ್ ನಲ್ಲಿ ಮಾಜಿ ಚಾಂಪಿಯನ್ ಮಲೇಶ್ಯದ ಲೀ ಝಿ ಜಿಯಾರನ್ನು ಸೋಲಿಸಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿ ಫೈನಲ್‌ ಗೆ ತಲುಪಿದ್ದಾರೆ.

22ರ ಹರೆಯದ ಸೇನ್ ಶುಕ್ರವಾರ 71 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್ ಪಂದ್ಯದುದ್ದಕ್ಕೂ ಪ್ರತಿರೋಧ ಒಡ್ಡಿದ್ದು ಲೀ ವಿರುದ್ಧ 20-22, 21-16, 21-19 ಗೇಮ್‌ ಗಳ ಅಂತರದಿಂದ ಜಯಶಾಲಿಯಾದರು.

2022ರ ಆವೃತ್ತಿಯ ಟೂರ್ನಮೆಂಟ್‌ ನಲ್ಲಿ ರನ್ನರ್ಸ್ ಅಪ್ ಎನಿಸಿಕೊಂಡ ನಂತರ ಸೇನ್ ಇದೀಗ ಟೂರ್ನಿಯಲ್ಲಿ ಅಂತಿಮ-4 ಘಟ್ಟ ಪ್ರವೇಶಿಸಿದ್ದಾರೆ.

ಇದೊಂದು ನಿಜವಾಗಿಯೂ ಉತ್ತಮ ಪಂದ್ಯವಾಗಿತ್ತು. ಗೆಲುವು ದಾಖಲಿಸಿದ್ದಕ್ಕೆ ಖುಷಿಯಾಗುತ್ತಿದೆ. ಅವರು ಮರು ಹೋರಾಟ ನೀಡಿ ಕಠಿಣ ಪೈಪೋಟಿ ನೀಡಲಿದ್ದಾರೆ ಎಂದು ನನಗೆ ಗೊತ್ತಿತ್ತು ಎಂದು ಸೇನ್ ಹೇಳಿದ್ದಾರೆ.

ವಿಶ್ವದ 18ನೇ ರ‍್ಯಾಂಕಿನ ಹಾಗೂ ಹಾಲಿ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಸೇನ್ ಸೆಮಿ ಫೈನಲ್‌ ನಲ್ಲಿ ಇಂಡೋನೇಶ್ಯದ 9ನೇ ರ‍್ಯಾಂಕಿನ ಜೋನಾಥನ್ ಕ್ರಿಸ್ಟಿ ಅವರನ್ನು ಎದುರಿಸಲಿದ್ದಾರೆ.

ಸೇನ್ ಕಳೆದ ವಾರ ಫ್ರೆಂಚ್ ಓಪನ್ನಲ್ಲಿ ನಾಲ್ಕು ಬಾರಿ ಮೂರು ಗೇಮ್‌ ಗಳ ಪಂದ್ಯಗಳನ್ನು ಆಡಿದ್ದರು. ಆನಂತರ ಸತತ ಎರಡು ಮ್ಯಾರಥಾನ್ ಪಂದ್ಯಗಳನ್ನು ಆಡಿದ್ದರು. ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ಸೇನ್ ಶ್ರೇಷ್ಠಮಟ್ಟದ ಪ್ರದರ್ಶನ ನೀಡಿದ್ದಾರೆ.

ಲಕ್ಷ್ಯ ಸೇನ್ ಮೊದಲ ಗೇಮ್‌ ನಲ್ಲಿ 12-7ರಿಂದ ಮುನ್ನಡೆ ಪಡೆದಿದ್ದರು. ಆದರೆ ತಿರುಗೇಟು ನೀಡಿದ ಲೀ 12-12ರಿಂದ ಸಮಬಲಗೊಳಿಸಿದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯ 20-20ರಿಂದ ಸಮಬಲಗೊಂಡಿತ್ತು. ಅಂತಿಮವಾಗಿ ಸೇನ್ 20-22 ಅಂತರದಿಂದ ಮೊದಲ ಗೇಮ್‌ ನಲ್ಲಿ ಸೋತರು.

ಎರಡನೇ ಗೇಮ್‌ ನಲ್ಲಿ ಸೇನ್ 11-9ರಿಂದ ಅಲ್ಪ ಮುನ್ನಡೆ ಪಡೆದರು. ಆ ನಂತರ ಸತತ 7 ಪಾಯಿಂಟ್ಸ್ ಪಡೆದು ಉತ್ತಮ ಪ್ರದರ್ಶನ ನೀಡಿದರು.

ನಿರ್ಣಾಯಕ ಪಂದ್ಯದಲ್ಲಿ ಸೇನ್ 7-5 ಹಾಗೂ 11-8ರಿಂದ ಮುನ್ನಡೆ ಪಡೆದರು. ಲೀ ಸತತ 4 ಅಂಕ ಗಳಿಸಿ ಪ್ರತಿರೋಧ ಒಡ್ಡಲು ಯತ್ನಿಸಿದರು. ಎರಡು ನಿರ್ಣಾಯಕ ಅಂಕಗಳನ್ನು ಗಳಿಸಿದ ಸೇನ್ ಪಂದ್ಯದ ಮೇಲೆ ಹಿಡಿತ ಸಾಧಿಸಿ ಮಲೇಶ್ಯ ಆಟಗಾರನ ವಿರುದ್ಧ ತನ್ನ ನಾಲ್ಕನೇ ಗೆಲುವು ದಾಖಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News