ಹಿಮಾಚಲ ಕಾಂಗ್ರೆಸ್ ಘಟಕದಲ್ಲಿ ಎಲ್ಲವೂ ಸರಿಯಿದೆ: ಡಿ.ಕೆ.ಶಿವಕುಮಾರ್

Update: 2024-02-29 14:00 GMT

Photo : X/@DKShivakumar

ಹೊಸದಿಲ್ಲಿ: ಕರ್ನಾಟಕದಿಂದ ಹಿಮಾಚಲ ಪ್ರದೇಶದವರೆಗೆ ತಮ್ಮ ಟ್ರಬಲ್ ಶೂಟಿಂಗ್ ಕೌಶಲದಿಂದ ಸದ್ದು ಮಾಡುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್, ಬಣ ರಾಜಕೀಯದಿಂದ ಪತನವಾಗುವ ಹಂತ ತಲುಪಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರಕಾರದಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಶಿಮ್ಲಾದಲ್ಲಿ ಗುರುವಾರ ಸಂಜೆ ವಿಕ್ರಮಾದಿತ್ಯ ಸಿಂಗ್ ಹಾಗೂ ಪ್ರತಿಭಾ ಸಿಂಗ್ ಅವರೊಂದಿಗೆ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, “ಎಲ್ಲವೂ ಸರಿಯಿದೆ. ಸರಕಾರವು 5 ವರ್ಷಗಳ ಉಳಿಯಲಿದೆ. ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಲಾಗಿದೆ” ಎಂದು ತಿಳಿಸಿದ್ದಾರೆ ಎಂದು ndtv ವರದಿ ಮಾಡಿದೆ.

ಈ ವಾರದುದ್ದಕ್ಕೂ ತೀವ್ರ ಬೇಗುದಿಗೀಡಾಗಿದ್ದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಸರಕಾರವು ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಧ್ಯಪ್ರವೇಶದಿಂದ ನಿರಾಳಗೊಂಡಿದೆ. ಹಿಮಾಚಲ ಪ್ರದೇಶದ ಸರಕಾರದ ನೇತೃತ್ವ ವಹಿಸಿರುವ ಸುಖ್ವಿಂದರ್ ಸಿಂಗ್ ಸುಖು ಅವರ ಸ್ಥಾನ ಭದ್ರ ಎಂಬ ಸಂದೇಶ ರವಾನಿಸಿರುವ ಡಿ.ಕೆ.ಶಿವಕುಮಾರ್, “ನಾವು ಎಲ್ಲ ಶಾಸಕರ ಮಾತುಗಳನ್ನೂ ಆಲಿಸುತ್ತಿದ್ದೇವೆ. ಸರಕಾರದಲ್ಲಿ ಯಾವುದೇ ಸಮಸ್ಯೆಯಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿನ ವೈಫಲ್ಯದ ಹೊಣೆಯನ್ನು ಮುಖ್ಯಮಂತ್ರಿ ಸುಖು ಹೊತ್ತುಕೊಂಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿನ ಏಕೈಕ ರಾಜ್ಯಸಭಾ ಸ್ಥಾನದಲ್ಲಿ ಪರಾಭವಗೊಳ್ಳುವ ಮೂಲಕ ಕಾಂಗ್ರೆಸ್ ಆಘಾತ ಅನುಭವಿಸಿತ್ತು. ಕಾಂಗ್ರೆಸ್ ಪಕ್ಷದ ಆರು ಮಂದಿ ಶಾಸಕರು ಅಡ್ಡ ಮತದಾನ ಮಾಡಿದ್ದರಿಂದ ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಎದುರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಪರಾಭವಗೊಂಡಿದ್ದರು.

“ನಾನು ವಿಫಲನಾಗಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ. ಇದರೊಂದಿಗೆ ಗುಪ್ತಚರ ಇಲಾಖೆಯೂ ವಿಫಲಗೊಂಡಿದ್ದು, ಬಿಜೆಪಿಯು ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂಬುದು ನಮಗೆ ತಿಳಿಯಲಿಲ್ಲ” ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News