ಧರ್ಮದ ಹೆಸರಿನಲ್ಲಿ ಮತಯಾಚನೆ ಆರೋಪ: ಚುನಾವಣೆಯಿಂದ ಪ್ರಧಾನಿ ಮೋದಿಯನ್ನು ಅನರ್ಹಗೊಳಿಸಲು ಕೋರಿದ್ದ ಅರ್ಜಿ ವಜಾ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಆರು ವರ್ಷಗಳ ಕಾಲ ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ದೆಹಲಿ ಹೈಕೋರ್ಟ್ ತಳ್ಳಿಹಾಕಿದೆ. ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮೋದಿಯವರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ವಕೀಲ ಆನಂದ್ ಎಸ್.ಜೋಂಡಾಲೆ ಅರ್ಜಿ ಸಲ್ಲಿಸಿ, ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 9ರಂದು ಉತ್ತರಪ್ರದೇಶದ ಪಿಲಿಭೀತ್ ನಲ್ಲಿ ಮಾಡಿದ ಭಾಷಣವನ್ನು ಇದರಲ್ಲಿ ಉಲ್ಲೇಖಿಸಿದ್ದರು.
ಈ ಭಾಷಣದಲ್ಲಿ ಮೋದಿ ಹಿಂದೂ ದೇವತೆಗಳ ಹೆಸರಿನಲ್ಲಿ ಮತ್ತು ಹಿಂದೂ ಪ್ರಾರ್ಥನಾ ಸ್ಥಳಗಳ ಹೆಸರಿನಲ್ಲಿ ಮತ್ತು ಸಿಖ್ ದೇವರು ಹಾಗೂ ಸಿಖ್ಖರ ಪ್ರಾರ್ಥನಾ ಸ್ಥಳಗಳ ಹೆಸರಿನಲ್ಲಿ ಮತದಾರರಿಂದ ಮತ ಯಾಚಿಸಿದ್ದರು ಎನ್ನುವುದು ಅರ್ಜಿದಾರರ ವಾದವಾಗಿತ್ತು.
"ವಿರೋಧ ಪಕ್ಷಗಳು ಮುಸ್ಲಿಮರ ಪರ ಎಂದು ಕೂಡಾ ಮೋದಿ ಹೇಳಿದ್ದಾಗಿ ವಿವರಿಸಲಾಗಿತ್ತು. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಜೊಂಡಾಲೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಮತ್ತು ಕರ್ತಾರ್‍ಪುರ ಸಾಹಿಬ್ ಕಾರಿಡಾರ್ ನಿರ್ಮಾಣದ ಹೆಗ್ಗಳಿಕೆಯನ್ನು ಮೋದಿ ಪಡೆದುಕೊಂಡಿದ್ದಾರೆ" ಎಂದು ಅರ್ಜಿದಾರರು ವಾದಿಸಿದ್ದರು.
ಹಲವು ಕಾರಣಗಳಿಂದ ಈ ಆರೋಪ ತಪ್ಪುಕಲ್ಪನೆಗಳಿಂದ ಕೂಡಿದೆ ಎಂದು ಉಲ್ಲೇಖಿಸಿ ನ್ಯಾಯಮೂರ್ತಿ ಸಚಿನ್ ದತ್ತಾ ಈ ಅರ್ಜಿಯನ್ನು ತಿರಸ್ಕರಿಸಿದರು. "ಅರ್ಜಿದಾರರು 2024ರ ಎಪ್ರಿಲ್ 10ರಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ಅರ್ಜಿಯನ್ನು ಚುನಾವಣಾ ಆಯೋಗ ಇತ್ಯರ್ಥಪಡಿಸುವ ಮುನ್ನ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ವಿಶೇಷವಾಗಿ ವಿಸ್ತರಿಸುವ ಹಕ್ಕು ಅರ್ಜಿದಾರರಿಗೆ ಇಲ್ಲ" ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.