ಜಾತಿ ಅಪರಾಧದಲ್ಲಿ ನಿಷ್ಕ್ರಿಯತೆ ಆರೋಪ | ತಮಿಳುನಾಡಿನ ವೆಂಗಾವಯಲ್ ನಲ್ಲಿ ದಲಿತರಿಂದ ಚುನಾವಣಾ ಬಹಿಷ್ಕಾರ

Update: 2024-04-19 15:25 GMT

PC : newindianexpress.com

ಚೆನ್ನೈ: ತಮ್ಮ ಕುಡಿಯುವ ನೀರನ್ನು ಮಲದಿಂದ ಕಲುಷಿತಗೊಳಿಸಿದ್ದ ದುಷ್ಕರ್ಮಿಗಳ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವಲ್ಲಿ ಸರಕಾರದ ನಿಷ್ಕ್ರಿಯತೆಯನ್ನು ಪ್ರತಿಭಟಿಸಿ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ವೆಂಗಾವಯಲ್ ಗ್ರಾಮದ ದಲಿತ ನಿವಾಸಿಗಳು ಶುಕ್ರವಾರ ನಡೆದ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಜಾತಿ ದೌರ್ಜನ್ಯದ ಹಿಂದಿನ ಹಿಂದೂ ಗುಂಪುಗಳನ್ನು ಸರಕಾರವು ರಕ್ಷಿಸುತ್ತಿದೆ ಎಂದು ಆರೋಪಿಸಿರುವ ನಿವಾಸಿಗಳು ನಿಜವಾದ ಅಪರಾಧಿಗಳನ್ನು ಪತ್ತೆ ಹಚ್ಚಿ ಬಂಧಿಸುವವರೆಗೂ ಮತದಾನ ಮಾಡಲು ನಿರಾಕರಿಸಿದ್ದಾರೆ.

ದಲಿತ ನಿವಾಸಿಗಳು ಬಾಯಿಗೆ ಕಪ್ಪುಬಟ್ಟೆಯನ್ನು ಕಟ್ಟಿಕೊಂಡು ತಮ್ಮ ನಿರಾಶೆಯನ್ನು ವ್ಯಕ್ತಪಡಿಸುವ ಪೋಸ್ಟರ್ ಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.‘ನಾವು ಮಲಮಿಶ್ರಿತ ನೀರನ್ನು ಪಡೆಯುತ್ತಿದ್ದೇವೆ ಮತ್ತು ನಿಮಗೆ ನಮ್ಮ ಮತಗಳು ಬೇಕೇ? ನಾವು ಮಲಮಿಶ್ರಿತ ನೀರನ್ನು ಕುಡಿದ ಬಳಿಕ ನಿಮಗೆ ನಮ್ಮ ಮತಗಳು ಬೇಕೇ?’ ಎಂದು ಒಂದು ಪೋಸ್ಟರ್ ನಲ್ಲಿ ಬರೆಯಲಾಗಿತ್ತು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವೆಂಗಾವಯಲ್ ನಿವಾಸಿ ಕನಕರಾಜ್ ಅವರು, ದುಷ್ಕರ್ಮಿಗಳನ್ನು ಬಂಧಿಸುವವರೆಗೂ ಸ್ಥಳೀಯ ಪಂಚಾಯತ್ ಸೇರಿದಂತೆ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ ಎಂದು ತಿಳಿಸಿದರು. ಕಲುಷಿತ ನೀರನ್ನು ಸೇವಿಸಿ ಅನಾರೋಗ್ಯಕ್ಕೊಳಗಾಗಿದ್ದ ಮಕ್ಕಳಲ್ಲಿ ಅವರ ಮಗಳೂ ಸೇರಿದ್ದಳು.

‘ನಮ್ಮ ಗ್ರಾಮದಲ್ಲಿ 20 ಕುಟುಂಬಗಳಿದ್ದು, ಸುಮಾರು 106 ಜನರು ಚುನಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳುವ ಬದಲು ನಮ್ಮ ಜನರಿಗೆ ಕಿರುಕುಳ ನೀಡುತ್ತಿರುವ ಪೊಲೀಸರು ಅವರಲ್ಲಿ ಕೆಲವರ ಫೋನ್ ಗಳನ್ನು ಕಿತ್ತುಕೊಂಡಿದ್ದಾರೆ. ಅವರು ಹೇಗೆ ನಮ್ಮ ಮತಗಳನ್ನು ನಿರೀಕ್ಷಿಸಿದ್ದಾರೆ? ಸರಕಾರವು ಈ ಪ್ರಕರಣವನ್ನು ನಿರ್ವಹಿಸಿರುವ ರೀತಿಯು ನಮಗೆ ತೀವ್ರ ನಿರಾಶೆಯನ್ನುಂಟು ಮಾಡಿದೆ,ಹೀಗಾಗಿ ನಮ್ಮ ಪಡಿತರ ಚೀಟಿಗಳನ್ನು ಸರಕಾರಕ್ಕೆ ಹಿಂದಿರುಗಿಸಲೂ ನಾವು ಸಿದ್ಧರಿದ್ದೇವೆ ’ ಎಂದು ಕನಕರಾಜ್ ಹೇಳಿದರು.

ಚುನಾವಣಾ ಬಹಿಷ್ಕಾರದ ಕುರಿತಂತೆ ಯಾವುದೇ ರಾಜಕೀಯ ಪಕ್ಷಗಳು ನಮ್ಮನ್ನು ಸಂಪರ್ಕಿಸಿಲ್ಲ ಎಂದರು.

ಡಿಸೆಂಬರ್ 2022ರಲ್ಲಿ ಕಲುಷಿತ ನೀರನ್ನು ಸೇವಿಸಿ ವೆಂಗಾವಯಲ್ ನ ದಲಿತ ಕುಟುಂಬಗಳ ಐವರು ಮಕ್ಕಳು ಅಸ್ವಸ್ಥಗೊಂಡಿದ್ದರು. ನಿವಾಸಿಗಳು ನೀರಿನ ಟ್ಯಾಂಕ್ ನನ್ನು ಪರಿಶೀಲಿಸಿದಾಗ ಅದರಲ್ಲಿ ಮಾನವ ಮಲ ಪತ್ತೆಯಾಗಿತ್ತು. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ಟ್ಯಾಂಕ್ ನನ್ನು ರಾಸಾಯನಿಕಗಳನ್ನು ಬಳಸಿ ಸ್ವಚ್ಛಗೊಳಿಸಲಾಗಿತ್ತು ಹಾಗೂ ಮನೆಗಳು ಮತ್ತು ಟ್ಯಾಂಕ್ ನನ್ನು ಸಂಪರ್ಕಿಸುವ ಪೈಪ್ ಗಳನ್ನು ಬದಲಿಸಲಾಗಿತ್ತು. ಆದರೆ ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ, ಬದಲಿಗೆ ಪೊಲೀಸರು ಮತ್ತು ತನಿಖಾಧಿಕಾರಿಗಳು ಕುಡಿಯುವ ನೀರಿನಲ್ಲಿ ಮಲ ಬೆರೆಸಿದ ಆರೋಪವನ್ನು ತಮ್ಮ ಮೇಲೆಯೇ ಹೊರಿಸಲು ಯತ್ನಿಸಿದ್ದರು ಎಂದು ದಲಿತ ನಿವಾಸಿಗಳು ದೂರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News