ಅಮೆರಿಕ ಸಾಮ್ರಾಜ್ಯಶಾಹಿಗೆ ಶರಣಾಗಿರುವ ಮೈತ್ರಿಯು ಈಗ ಭಾರತೀಯ ವಿದೇಶಾಂಗ ನೀತಿಯನ್ನು ರೂಪಿಸುತ್ತಿದೆ: ಗಾಝಾ ನಿರ್ಣಯ ಕುರಿತು ಭಾರತದ ನಡೆಗೆ CPM,CPI ಟೀಕೆ
ಹೊಸದಿಲ್ಲಿ: ಗಾಝಾದಲ್ಲಿ ಕದನ ವಿರಾಮಕ್ಕೆ ಕರೆ ನೀಡಿರುವ ವಿಶ್ವಸಂಸ್ಥೆಯ ನಿರ್ಣಯದ ಮೇಲೆ ಮತದಾನದಿಂದ ಭಾರತವು ದೂರ ಉಳಿದಿರುವುದು ಆಘಾತಕಾರಿಯಾಗಿದೆ ಮತ್ತು ಭಾರತೀಯ ವಿದೇಶಾಂಗ ನೀತಿಯು ಈಗ ಅಮೆರಿಕ ಸಾಮ್ರಾಜ್ಯಶಾಹಿಗೆ ಶರಣಾಗಿರುವ ಮೈತ್ರಿಯಿಂದ ರೂಪಿಸಲ್ಪಡುತ್ತಿದೆ ಎನ್ನುವುದನ್ನು ತೋರಿಸುತ್ತಿದೆ ಎಂದು ಸಿಪಿಎಂ ಮತ್ತು ಸಿಪಿಐ ಶನಿವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
‘ಗಾಝಾದಲ್ಲಿಯ ಈ ನರಮೇಧದ ಆಕ್ರಮಣವನ್ನು ನಿಲ್ಲಿಸಿ’ ಶೀರ್ಷಿಕೆಯ ಹೇಳಿಕೆಯಲ್ಲಿ ಸಿಪಿಎಂ ಪ್ರ.ಕಾರ್ಯದರ್ಶಿ ಸೀತಾರಾಮ ಯೆಚೂರಿ ಮತ್ತು ಸಿಪಿಐ ಪ್ರ.ಕಾರ್ಯದರ್ಶಿ ಡಿ.ರಾಜಾ ಅವರು,ಭಾರತದ ಈ ಕ್ರಮವು ಅದು ದೀರ್ಘಕಾಲದಿಂದ ಫೆಲೆಸ್ತೀನ್ ಹೋರಾಟಕ್ಕೆ ನೀಡುತ್ತಿರುವ ಬೆಂಬಲವನ್ನು ನಿರಾಕರಿಸಿದೆ ಎಂದು ಹೇಳಿದ್ದಾರೆ. ಭಾರತವು ಮತದಾನದಿಂದ ದೂರವಿರುವುದು ಅಮೆರಿಕ-ಇಸ್ರೇಲ್-ಭಾರತ ಮೈತ್ರಿಯನ್ನು ದೃಢಗೊಳಿಸುವ ಮೋದಿ ಸರಕಾರದ ಕ್ರಮಗಳನ್ನೂ ಸೂಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಬಹುಮತದಿಂದ ಅಂಗೀಕರಿಸಿರುವ ನಿರ್ಣಯವು ಗಾಝಾದಲ್ಲಿ ನಡೆಯುತ್ತಿರುವ ಇಸ್ರೇಲಿ ಆಕ್ರಮಣದಲ್ಲಿ ನಾಗರಿಕರ ರಕ್ಷಣೆಗಾಗಿ ಹಾಗೂ ಕಾನೂನು ಮತ್ತು ಮಾನವೀಯ ಬದ್ಧತೆಗಳನ್ನು ಎತ್ತಿಹಿಡಿಯಲು ಕದನ ವಿರಾಮಕ್ಕೆ ಕರೆ ನೀಡಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ನಿರ್ಣಯವನ್ನು ಅಂಗೀಕರಿಸುತ್ತಿದ್ದಂತೆ ಇಸ್ರೇಲ್ ಗಾಜಾ ಪಟ್ಟಿಯಲ್ಲಿ ತನ್ನ ವಾಯು ಮತ್ತು ಭೂದಾಳಿಗಳನು ಹೆಚ್ಚಿಸಿದೆ ಎಂದು ಹೇಳಿಕೆಯು ತಿಳಿಸಿದೆ.
ಇಸ್ರೇಲ್ 22 ಲಕ್ಷ ಫೆಲೆಸ್ತೀನಿಗಳು ವಾಸವಾಗಿರುವ ಗಾಜಾ ಪಟ್ಟಿಗೆ ಎಲ್ಲ ಸಂಪರ್ಕಗಳನ್ನೂ ಕಡಿತಗೊಳಿಸಿದೆ ಎಂದಿರುವ ಉಭಯ ನಾಯಕರು,ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಬಹುಮತದ ನಿರ್ಣಯವನ್ನು ಗೌರವಿಸಿ ತಕ್ಷಣ ಕದನ ವಿರಾಮವನ್ನು ಘೋಷಿಸಬೇಕು. ಪೂರ್ವ ಜೆರುಸಲೇಮ್ ಅನ್ನು ಫೆಲೆಸ್ತೀನ್ ರಾಜಧಾನಿಯನ್ನಾಗಿ 1967ಕ್ಕೆ ಮೊದಲಿನ ಗಡಿಗಳೊಂದಿಗೆ ದ್ವಿರಾಷ್ಟ್ರ ಪರಿಹಾರಕ್ಕಾಗಿ ಭದ್ರತಾ ಮಂಡಳಿಯ ನಿರ್ಣಯವನ್ನು ಜಾರಿಗೊಳಿಸಲು ವಿಶ್ವಸಂಸ್ಥೆಯು ಖುದ್ದು ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.