ಚುನಾವಣೋತ್ತರ ಸಮೀಕ್ಷೆ ಚರ್ಚೆಗಳಿಗೆ ಕಾಂಗ್ರೆಸ್ ಬಹಿಷ್ಕಾರ: ಓಡಿ ಹೋಗಬೇಡಿ ಎಂದು ವ್ಯಂಗ್ಯವಾಡಿದ ಅಮಿತ್ ಶಾ
ಹೊಸದಿಲ್ಲಿ: ಚುನಾವಣೋತ್ತರ ಸಮೀಕ್ಷೆಯ ಚರ್ಚೆಗಳಿಂದ ದೂರ ಉಳಿಯಲು ನಿರ್ಧರಿಸಿರುವ ಕಾಂಗ್ರೆಸ್ ನಿಲುವನ್ನು ಗೇಲಿ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಚರ್ಚೆಯಿಂದ ಓಡಿ ಹೋಗಬೇಡಿ” ಎಂದು ಕಾಂಗ್ರೆಸ್ ಪಕ್ಷವನ್ನು ಕುಟುಕಿದ್ದಾರೆ.
ಏಳನೆ ಮತ್ತು ಕೊನೆಯ ಹಂತದ ಮತದಾನ ಇಂದು ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತಾರೂಢ ಬಿಜೆಪಿ ಪಕ್ಷವು ಸತತ ಮೂರನೆಯ ಅವಧಿಗೆ ಅಧಿಕಾರಕ್ಕೆ ಮರಳುವ ಮೂಲಕ ಚರಿತ್ರೆ ನಿರ್ಮಿಸುವ ತವಕದಲ್ಲಿದೆ.
ಇಂದು ಸಂಜೆ 6.30ರ ನಂತರ ಸುದ್ದಿ ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದು, ಈ ಸಂಬಂಧ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಚರ್ಚೆಗಳನ್ನು ಹಮ್ಮಿಕೊಂಡಿವೆ. ಆದರೆ, ಶುಕ್ರವಾರ ತಾನು ಚುನಾವಣೋತ್ತರ ಸಮೀಕ್ಷೆಯ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ ಪ್ರಕಟಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಈ ನಿಲುವನ್ನು ಟೀಕಿಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, “ತಾನು ದೊಡ್ಡ ಪ್ರಮಾಣದಲ್ಲಿ ಪರಾಭವಗೊಂಡಿದ್ದೇನೆ ಎಂಬ ಸಂಗತಿ ಕಾಂಗ್ರೆಸ್ ಪಕ್ಷಕ್ಕೆ ಮನವರಿಕೆಯಾಗಿದೆ. ಹೀಗಾಗಿ, ಅವರೀಗ ಯಾವ ಮುಖ ಇಟ್ಟುಕೊಂಡು ಮಾಧ್ಯಮ ಮತ್ತು ಸಾರ್ವಜನಿಕರನ್ನು ಎದುರಿಸುತ್ತಾರೆ? ಇದರಿಂದಾಗಿಯೇ ಕಾಂಗ್ರೆಸ್ ಚುನಾವಣೋತ್ತರ ಸಮೀಕ್ಷೆಯ ಚರ್ಚೆಗಳಿಂದ ದೂರ ಓಡಿ ಹೋಗುತ್ತಿದೆ. ನೀವು ಓಡಿ ಹೋಗಬೇಡಿ, ಬದಲಿಗೆ ಸೋಲನ್ನು ಎದುರಿಸಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಹೇಳಲು ಬಯಸುತ್ತೇನೆ” ಎಂದು ಕಾಲೆಳೆದಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡಾ ಕಾಂಗ್ರೆಸ್ ನಿರ್ಧಾರವನ್ನು ಆಕ್ಷೇಪಿಸಿದ್ದು, “ತನ್ನ ಆಟಿಕೆಯನ್ನು ಕಿತ್ತುಕೊಂಡಾಗ ಮಗು ಅಳುವಂತೆ ಪುರಾತನ ಪಕ್ಷವಾದ ಕಾಂಗ್ರೆಸ್ ವರ್ತಿಸುವುದು ಶೋಭೆಯಲ್ಲ. ಅತಿ ದೊಡ್ಡ ವಿರೋಧ ಪಕ್ಷವೊಂದರಿಂದ ಯಾರಾದರೂ ಒಂದು ಮಟ್ಟದ ಪ್ರಬುದ್ಧತೆಯನ್ನು ನಿರೀಕ್ಷಿಸುತ್ತಾರೆ” ಎಂದು ಎಕ್ಸ್ ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ಟೀಕಿಸಿದ್ದಾರೆ.
ಚುನಾವಣೋತ್ತರ ಸಮೀಕ್ಷೆಯ ಚರ್ಚೆಗಳಿಂದ ತಮ್ಮ ಪಕ್ಷವು ದೂರ ಉಳಿಯುವ ನಿರ್ಧಾರವನ್ನು ಶುಕ್ರವಾರ ಪ್ರಕಟಿಸಿದ್ದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, “ಈಗಾಗಲೇ ಮತದಾರರು ತಮ್ಮ ಮತವನ್ನು ಚಲಾಯಿಸಿದ್ದು, ಅವರ ತೀರ್ಪು ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ಅದರ ಫಲಿತಾಂಶವು ಜೂನ್ 4ರಂದು ಪ್ರಕಟವಾಗಲಿದೆ. ಅದಕ್ಕೂ ಮುನ್ನವೇ, ಟಿಆರ್ಪಿಗಾಗಿ ಊಹಾಪೋಹ ಹಾಗೂ ಕೆಸರೆರಚಾಟದ ಚರ್ಚೆಗಳಲ್ಲಿ ತೊಡಗಲು ಯಾವುದೇ ಕಾರಣಗಳು ನಮಗೆ ಕಾಣುತ್ತಿಲ್ಲ. ಚುನಾವಣೋತ್ತರ ಸಮೀಕ್ಷೆಯ ಚರ್ಚೆಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಭಾಗವಹಿಸುವುದಿಲ್ಲ. ಯಾವುದೇ ಚರ್ಚೆಯ ಉದ್ದೇಶ ಮಾಹಿತಿ ನೀಡುವುದಾಗಿರಬೇಕು. ನಾವು ಜೂನ್ 4ರ ನಂತರದ ಚರ್ಚೆಗಳಲ್ಲಿ ಸಂತೋಷವಾಗಿ ಭಾಗವಹಿಸಲಿದ್ದೇವೆ” ಎಂದು ಸ್ಪಷ್ಟಪಡಿಸಿದ್ದರು.
कांग्रेस को अपनी प्रचंड हार का पता चल गया है, तो अब किस मुँह से मीडिया और जनता को फेस करे? इसलिए, कांग्रेस एग्जिट पोल से भाग रही है।
— Amit Shah (Modi Ka Parivar) (@AmitShah) May 31, 2024
मैं कांग्रेस पार्टी से कहना चाहता हूँ कि भागो नहीं, हार का सामना करके आत्मचिंतन करो। pic.twitter.com/pxeT3Qw8wA