ತಿರುಪತಿ ಲಡ್ಡು ಕಲಬೆರಕೆ ವಿವಾದ | ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದ ಸಿಬಿಐ
ಅಮರಾವತಿ : ಸುಪ್ರೀಂ ಕೋರ್ಟ್ ನಿರ್ದೇಶನದ ಬೆನ್ನಿಗೇ, ತಿರುಪತಿ ಲಡ್ಡುವಿನಲ್ಲಿ ಪ್ರಾಣಿಜನ್ಯ ಕೊಬ್ಬನ್ನು ಬೆರೆಸಲಾಗಿದೆ ಎಂಬ ಆರೋಪದ ಕುರಿತು ತನಿಖೆ ನಡೆಸಲು ಸಿಬಿಐ ಸ್ವತಂತ್ರ ವಿಶೇಷ ತನಿಖಾ ತಂಡವನ್ನು ರಚಿಸಿದೆ ಎಂದು ವರದಿಯಾಗಿದೆ.
ಈ ತಂಡದಲ್ಲಿ ಇಬ್ಬರು ಸಿಬಿಐ ಅಧಿಕಾರಿಗಳು, ಇಬ್ಬರು ಆಂಧ್ರಪ್ರದೇಶ ಪೊಲೀಸರು ಹಾಗೂ ಓರ್ವ ಎಫ್ ಎಸ್ ಎಸ್ ಎ ಐ ಅಧಿಕಾರಿ ಇರಲಿದ್ದಾರೆ.
ಆಂಧ್ರಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಚ.ದ್ವಾರಕಾ ತಿರುಮಲ ರಾವ್ ಪ್ರಕಾರ, ಸಿಬಿಐ ನಿರ್ದೇಶಕರ ಮೇಲುಸ್ತುವಾರಿಯ ವಿಶೇಷ ತನಿಖಾ ತಂಡದ ಸದಸ್ಯರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿಗಳಾದ ಸರ್ವಶ್ರೇಷ್ಠ ತ್ರಿಪಾಠಿ ಹಾಗೂ ಗೋಪಿನಾಥ್ ಜೆಟ್ಟಿ ಅವರನ್ನು ರಾಜ್ಯ ಸರಕಾರ ಹೆಸರಿಸಿದೆ ಎಂದು ಹೇಳಿದ್ದಾರೆ.
ಈ ಕುರಿತು ಪಿಟಿಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಚ.ದ್ವಾರಕಾ ತಿರಮಲ ರಾವ್, “ನಾವು ಹೆಸರುಗಳನ್ನು ಕಳಿಸಿಕೊಟ್ಟ ನಂತರ, ಸಿಬಿಐ ನಿರ್ದೇಶಕರು ಐದು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ. ರಾಜ್ಯ ಸರಕಾರದಿಂದ ಈ ಹೆಸರುಗಳಿಗೆ ಅನುಮೋದನೆ ಪಡೆದಿದ್ದು, ನಂತರ ತ್ರಿಪಾಠಿ ಹಾಗೂ ಗೋಪಿನಾಥ್ ಜೆಟ್ಟಿ ಅವರ ಹೆಸರನ್ನು ವಿಶೇಷ ತನಿಖಾ ತಂಡದಲ್ಲಿ ಸೇರ್ಪಡೆ ಮಾಡಲು ಸಿಬಿಐಗೆ ರವಾನಿಸಿದ್ದೆವು” ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ, ಆಂಧ್ರಪ್ರದೇಶ ಸರಕಾರ ರಚಿಸಿದ್ದ ವಿಶೇಷ ತನಿಖಾ ತಂಡದಲ್ಲೂ ತ್ರಿಪಾಠಿ ಮತ್ತು ಗೋಪಿನಾಥ್ ಜೆಟ್ಟಿ ಭಾಗವಾಗಿದ್ದರು. ಆದರೆ, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ವಿಶೇಷ ತನಿಖಾ ತಂಡವು ಅನೂರ್ಜಿತಗೊಂಡಿದೆ.