“ಜಾತ್ಯತೀತ ಸಂವಿಧಾನ ಬದಲಾಯಿಸುವ ಯತ್ನ”: ರಾಮ ಮಂದಿರ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸುವಿಕೆ ವಿರುದ್ಧ 22 ಅನಿವಾಸಿ ಸಂಘಟನೆಗಳ ಜಂಟಿ ಹೇಳಿಕೆ
ಹೊಸದಿಲ್ಲಿ: ಅಮೆರಿಕ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ 22 ದಕ್ಷಿಣ ಏಷ್ಯಾ ಮೂಲದವರ ಸಂಘಟನೆಗಳು ಸೋಮವಾರ ಜಂಟಿ ಹೇಳಿಕೆ ಬಿಡುಗಡೆಗೊಳಿಸಿ, ಅಯೋದ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಭಾಗವಹಿಸುವಿಕೆಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿವೆ. 16ನೇ ಶತಮಾನದ ಬಾಬರಿ ಮಸೀದಿ ನೆಲಸಮಗೊಳಿಸಿದ ಸ್ಥಳದಲ್ಲಿ ನಿರ್ಮಾಣಗೊಂಡ ಅಯೋಧ್ಯೆಯ ಶ್ರೀ ರಾಮ ಮಂದಿರದ ಉದ್ಘಾಟನೆಯಲ್ಲಿ ಭಾಗವಹಿಸಿ ಮೋದಿ “ಅಪಾಯಕಾರಿ ಮುನ್ನುಡಿ” ರಚಿಸಿದ್ದಾರೆ ಎಂದು ಈ ಸಂಘಟನೆಗಳು ಹೇಳಿವೆ. ಅಷ್ಟೇ ಅಲ್ಲದೆ ಈ ವಿದ್ಯಮಾನವು ಭಾರತದ ಜಾತ್ಯತೀತ ಸಂವಿಧಾನವನ್ನು ಬದಲಾಯಿಸಲು ಮತ್ತು ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಒಂದು ಪ್ರಯತ್ನವಾಗಿದೆ ಎಂಬುದು ತಮ್ಮ ಅನಿಸಿಕೆ ಎಂದು ಈ ಸಂಘಟನೆಗಳು ಹೇಳಿವೆ.
ರಾಮ ಮಂದಿರ ಉದ್ಘಾಟನೆಯಲ್ಲಿ ಪ್ರಧಾನಿಯ ಭಾಗವಹಿಸುವಿಕೆಯು ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರದ ಆರಂಭವನ್ನು ಸೂಚಿಸಿದೆ ಎಂದು ಈ ಸಂಘಟನೆಗಳು ಹೇಳಿವೆ. “ಗಣರಾಜ್ಯೋತ್ಸವ ದಿನಕ್ಕಿಂತ ನಾಲ್ಕು ದಿನಗಳಿಗೆ ಮುನ್ನ ನಡೆದ ಈ ಸಮಾರಂಭವು ಡಾ. ಬಿ. ಆರ್ ಅಂಬೇಡ್ಕರ್ ಅವರು ರಚಿಸಿದ ಭಾರತದ ಜಾತ್ಯತೀತ ಸಂವಿಧಾನವನ್ನು ಬದಿಗೆ ಸರಿಸುವ ಮತ್ತು ಬದಲಾಯಿಸುವ ಯತ್ನವಾಗಿದೆ,” ಎಂದು ಜಂಟಿ ಹೇಳಿಕೆ ತಿಳಿಸಿದೆ.
“ಪ್ರಧಾನಿ ಮೋದಿ ಮತ್ತು ಆಡಳಿತ ಪಕ್ಷದ ಇತರ ಸದಸ್ಯರು ಮತ್ತು ಆರೆಸ್ಸೆಸ್ ಪ್ರಮುಖರಿಂದ ಈ ಯೋಜಿತ ʼಪ್ರಾಣ ಪ್ರತಿಷ್ಠಾಪನೆ”ಯು ಆರೆಸ್ಸೆಸ್ ನ ದೀರ್ಘಕಾಲಿಕ ಗುರಿಯಾದ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಹಾಗೂ ಸಂವಿಧಾನದ ಸ್ಥಾನದಲ್ಲಿ ದಲಿತ ವಿರೋಧಿ ಮತ್ತು ಪುರುಷ ಪ್ರಧಾನ ಪ್ರಾಚೀನ ಭಾರತೀಯ ಗ್ರಂಥವಾಗಿರುವ ಬ್ರಾಹ್ಮಣಿಕ ಮನುಸ್ಮೃತಿಯನ್ನು ತರುವ ನಿಟ್ಟಿನಲ್ಲಿ ಭಾರತ ಹೆಜ್ಜೆಯಿರಿಸಿದೆ ಎಂಬುದರ ಸಂಕೇತವಾಗಿದೆ,” ಎಂದು ಹೇಳಿಕೆ ತಿಳಿಸಿದೆ.
“ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು, ಪ್ರಮುಖವಾಗಿ ಮುಸ್ಲಿಮರ ವಿರುದ್ಧ ಹೆಚ್ಚುತ್ತಿರುವ ತಾರತಮ್ಯ ಮತ್ತು ಹಿಂಸೆಯ ಹಿನ್ನೆಲೆಯೊಂದಿಗೆ ಈ ಪ್ರಾಣಪ್ರತಿಷ್ಠಾಪನಾ ಕಾರ್ಯ ನಡೆಯುತ್ತಿದೆ ಮತ್ತು ದೇಶದ ಜಾತ್ಯತೀತ ಮೌಲ್ಯ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ,” ಎಂದು ಹೇಳಿಕೆ ತಿಳಿಸಿದೆ.
“ಮೋದಿಯ ನಾಯಕತ್ವದಲ್ಲಿ ಬಿಜೆಪಿಯು ಶಾಲಾ ಪಠ್ಯಗಳ ಪರಿಷ್ಕರಣೆ ಮತ್ತು ಜನಪ್ರಿಯ ಮಾಧ್ಯಮ ಮತ್ತು ಸಾರ್ವಜನಿಕ ಮತ್ತು ರಾಜಕೀಯ ವಲಯಗಳಲ್ಲಿ ಹೇಳಿದಂತೆ ಇತಿಹಾಸವನ್ನು ಮರುಬರೆಯುವ ಮೂಲಕ ಭಾರತದಲ್ಲಿ ಮುಸ್ಲಿಂ ಪರಂಪರೆಯ ಪಳೆಯುಳಿಕೆಗಳನ್ನು ಅಳಿಸುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಪರಕೀಯರು ಎಂದು ಬಿಂಬಿಸುವ ಹಿಂದೂ ಸಾರ್ವಭೌಮತ್ವ ಸಿದ್ಧಾಂತದ ಯತ್ನ ಇದಾಗಿದೆ,” ಎಂದು ಹೇಳಿಕೆ ತಿಳಿಸಿದೆ.
“ಭಾರತವು ಮುಂದಿನ ಲೋಕಸಭಾ ಚುನಾವಣೆಗೆ ಸಿದ್ಧಗೊಳ್ಳುತ್ತಿರುವ ಸಂದರ್ಭದಲ್ಲಿ ಈ ರಾಮ ಮಂದಿರವನ್ನು ಬಾಬ್ರಿ ಮಸೀದಿ ಒಮ್ಮೆ ಇದ್ದ ಸ್ಥಳದಲ್ಲಿ ಉದ್ಘಾಟಿಸುವ ಮೂಲಕ ಬಿಜೆಪಿಯು ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಇರುವಿಕೆಯ ಹಕ್ಕನ್ನು ಮತ್ತು ಅವರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಗೌಣವಾಗಿಸಿದೆ,” ಎಂದು ಹೇಳಿಕೆಗಳು ತಿಳಿಸಿವೆ. ಭಾರತದಲ್ಲಿ ಮುಸ್ಲಿಮರು, ದಲಿತರು, ಕ್ರೈಸ್ತರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯಗಳನ್ನು ಧೈರ್ಯದಿಂದ ವಿರೋಧಿಸುವವರೆಲ್ಲರೊಂದಿಗೆ ತಾವು ನಿಲ್ಲುವುದಾಗಿ ಈ ಸಂಘಟನೆಗಳು ಹೇಳಿವೆ.
ಜಂಟಿ ಹೇಳಿಕೆಗೆ ಸಹಿ ಹಾಕಿದ ಸಂಸ್ಥೆಗಳ ಹೆಸರುಗಳು ಇಂತಿವೆ:
ಸೌತ್ ಏಷ್ಯಾ ಜಸ್ಟಿಸ್ ಕ್ಯಾಂಪೇನ್, ಸೌತ್ ಏಷ್ಯಾ ಸಾಲಿಡಾರಿಟಿ ಗ್ರೂಪ್, ಅಲೈಯನ್ಸ್ ಎಗೇನ್ಸ್ಟ್ ಇಸ್ಲಾಮೋಫೋಬಿಯಾ-ಆಸ್ಟ್ರೇಲಿಯಾ, ಭಾರತದಲ್ಲಿ ಫ್ಯಾಸಿಸಂ ವಿರುದ್ಧದ ಒಕ್ಕೂಟ, ಕ್ರೇಗಿಬರ್ನ್ ಮಸೀದಿ ಮತ್ತು ಸಮುದಾಯ ಕೇಂದ್ರ, ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ - ಯುಕೆ, ಇಂಡಿಯಾ ಸಿವಿಲ್ ವಾಚ್ ಇಂಟರ್ ನ್ಯಾಷನಲ್, ಉತ್ತರ ಅಮೆರಿಕಾ , ಇಂಡಿಯಾ ಲೇಬರ್ ಸಾಲಿಡಾರಿಟಿ (ಯುಕೆ), ಇಂಡಿಯನ್ ಅಲೈಯನ್ಸ್ ಪ್ಯಾರಿಸ್ - ಫ್ರಾನ್ಸ್, ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್, ಇಂಟರ್‌ನ್ಯಾಷನಲ್ ಸಾಲಿಡಾರಿಟಿ ಫಾರ್ ಅಕಾಡೆಮಿಕ್ ಫ್ರೀಡಂ ಇನ್ ಇಂಡಿಯಾ (ಇನ್ಸಾಫ್ ಇಂಡಿಯಾ), ಮೆಲ್ಬೋರ್ನ್ ಗ್ರ್ಯಾಂಡ್ ಮಸೀದಿ, ಮುಸ್ಲಿಂ ಕಲೆಕ್ಟಿವ್ - ಆಸ್ಟ್ರೇಲಿಯಾ, ಪೀಸ್ ಇನ್ ಇಂಡಿಯಾ (ಯುಕೆ), ಪೆರಿಯಾರ್ ಅಂಬೇಡ್ಕರ್ ಥಾಟ್ಸ್ ಸರ್ಕಲ್ ಆಫ್ ಆಸ್ಟ್ರೇಲಿಯಾ, ಸ್ಕಾಟಿಷ್ ಇಂಡಿಯನ್ಸ್ ಫಾರ್ ಜಸ್ಟಿಸ್, ಸೌತ್ ಏಷ್ಯನ್ ಡಯಾಸ್ಪೊರಾ ಆಕ್ಷನ್ ಕಲೆಕ್ಟಿವ್ (SADAC), ಸ್ಟ್ರೈವ್ ಯುಕೆ, ದಿ ರೈಟ್ಸ್ ಕಲೆಕ್ಟಿವ್ (ಯುಕೆ), ಯುಕೆ ಇಂಡಿಯನ್ ಮುಸ್ಲಿಂ ಕೌನ್ಸಿಲ್, ಯುನೈಟಿಂಗ್ ಉಮ್ಮಾ ಆಫ್ ಆಸ್ಟ್ರೇಲಿಯಾ ಆರ್ಗನೈಸೇಶನ್ ಮತ್ತು ವಿಮೆನ್ ಎಗೇನ್ಸ್ಟ್ ಕಾಸ್ಟ್.