ಆಂಧ್ರ ಪ್ರದೇಶದಲ್ಲಿನ ಸರಣಿ ಹತ್ಯೆ ಪ್ರಕರಣ: ʼಸೈನೈಡ್ ಕಿಲ್ಲರ್ಸ್ʼ ಮಹಿಳಾ ಗ್ಯಾಂಗ್ ಬಂಧನ!

Update: 2024-09-07 09:56 GMT

PC : timesofindia.indiatimes.com

ವಿಜಯವಾಡ: ಸೈನೈಡ್ ನೀಡಿ ಸರಣಿ ಹತ್ಯೆಯನ್ನು ಮಾಡುತ್ತಿದ್ದ ಮೂವರು ಮಹಿಳೆಯರಿದ್ದ ಗುಂಪನ್ನು ಬಂಧಿಸುವಲ್ಲಿ ಆಂಧ್ರ ಪೊಲೀಸರು ಯಶಸ್ವಿಯಾಗಿದ್ದು, ಕೇರಳದ ಸೈನೈಡ್ ಕಿಲ್ಲರ್ ಜಾಲಿ ಜಾಸೆಫ್ ಕೃತ್ಯವನ್ನು ನೆನಪಿಸುವಂತಾಗಿದೆ.

ಕೇರಳದ ಕುಖ್ಯಾತ ಕೂಡತ್ತಾಯಿ ಸರಣಿ ಹತ್ಯೆಯನ್ನು ನೆನಪಿಸುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ನಡೆದಿದೆ. ಕೂಡತ್ತಾಯಿಯಲ್ಲಿ ಕೇರಳದ ಜಾಲಿ ಜೋಸೆಫ್ 14 ವರ್ಷಗಳಲ್ಲಿ ತನ್ನ ಕುಟುಂಬದ 6 ಸದಸ್ಯರನ್ನು ಸೈನೈಡ್ ನೀಡಿ ಕೊಲೆ ಮಾಡಿದ್ದಳು.

ಅದರಂತೆಯೇ ತೆನಾಲಿ ನಿವಾಸಿಗಳಾದ ಮುನಗಪ್ಪ ರಜನಿ (40), ಮುಡಿಯಾಲ ವೆಂಕಟೇಶ್ವರಿ ಅಲಿಯಾಸ್ ಬುಜ್ಜಿ (32), ಗೊಂಟು ರಮಣಮ್ಮ (60) ಎಂಬ ಮೂವರು ಮಹಿಳೆಯರು ದುರ್ಬಲ ಜನರನ್ನು ಗುರಿ ಮಾಡಿ ಅವರ ಜೊತೆ ಸ್ನೇಹ ಬೆಳೆಸಿ ಬಳಿಕ ಸೈನೈಡ್ ನೀಡಿ ಕೊಲೆ ಮಾಡಿದ್ದಾರೆ.

ಈ ಕುಖ್ಯಾತ ಮಹಿಳಾ ಗ್ಯಾಂಗ್ ಅನ್ನು ಬಂಧಿಸುವ ಮೂಲಕ ಪೊಲೀಸರು ಶೇಕ್ ನಾಗೂರ್ ಬಿ, ಸುಬ್ಬಲಕ್ಷ್ಮಿ, ನಾಗಮ್ಮ ಸರಣಿ ಕೊಲೆ ಆರೋಪಿಗಳನ್ನು ಬಂಧಿಸಿದಂತಾಗಿದೆ. ಸೈನೈಡ್ ಮಿಶ್ರಿತ ಪಾನೀಯ ಮತ್ತು ಆಹಾರವನ್ನು ನೀಡಿ ಕೊಲೆ ಮಾಡಿ ಚಿನ್ನ ದರೋಡೆ ಮಾಡಿರುವುದನ್ನು ಕುಖ್ಯಾತ ಗ್ಯಾಂಗ್ ಒಪ್ಪಿಕೊಂಡಿದೆ. ಹೆಚ್ಚಿನ ವಿಚಾರಣೆ ಬಳಿಕ ಈ ಮಹಿಳೆಯರು ನಡೆಸಿರುವ ಇನ್ನಷ್ಟು ಪ್ರಕರಣಗಳು ಬಯಲಾಗುವ ಸಾಧ್ಯತೆ ಕೂಡ ಇದೆ.

ಈ ಗ್ಯಾಂಗ್ ನಲ್ಲಿದ್ದ ಮಹಿಳೆಯರು ತಮ್ಮದೇ ಕುಟುಂಬದ ಸದಸ್ಯರನ್ನು, ನೆರೆಹೊರೆಯವರನ್ನು ಗುರಿಯಾಗಿಸಿ ಕೃತ್ಯ ನಡೆಸಿದೆ. ಈ ಗ್ಯಾಂಗ್ 2022ರಿಂದ ಅನೇಕ ಕೊಲೆಗಳಲ್ಲಿ ಭಾಗಿಯಾಗಿದೆ ಎಂದು ಶಂಕಿಸಲಾಗಿದ್ದು, ಮೂವರನ್ನು ಕೊಲೆ ಮಾಡಲು ವಿಫಲ ಪ್ರಯತ್ನಗಳನ್ನು ನಡೆಸಿದೆ ಎನ್ನುವುದು ಬಯಲಾಗಿದೆ.

ಆರೋಪಿಗಳು ತೆನಾಲಿಯ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವ ಕೃಷ್ಣ ಎಂಬವರಿಂದ ಎರಡು ಬಾರಿ 4,000 ರೂ.ಗೆ ಸೈನೈಡ್ ಖರೀದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಘಟನೆ ಬಯಲಾಗುತ್ತಿದ್ದಂತೆ ಕೃಷ್ಣ ಪರಾರಿಯಾಗಿದ್ದಾನೆ.

ಗುಂಟೂರು ಎಸ್ಪಿ ಎಸ್ ಸತೀಶ್ ಕುಮಾರ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ಎರಡು ತಿಂಗಳ ಹಿಂದೆ ವಡ್ಲಮುಡಿ ಗ್ರಾಮದ ಬಳಿಯ ಹೊಲವೊಂದರಲ್ಲಿ ಶೇಕ್ ನಾಗೂರ್ ಬೀ ಎಂಬವರ ಕೊಳೆತ ಶವ ಪತ್ತೆಯಾಗಿತ್ತು. ಪೊಲೀಸರು ಆರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಮೊಬೈಲ್ ಮಾಹಿತಿ, ಮಹೇಶ್ ಎಂಬ ಆಟೋ ಚಾಲಕನ ವಿಚಾರಣೆ ನಡೆಸಿದಾಗ ಇದರ ಹಿಂದಿನ ಷಡ್ಯಂತ್ರ ಬಯಲಾಗಿದೆ ಎಂದು ಹೇಳಿದ್ದಾರೆ.

ಆರೋಪಿಗಳು ಜೂ.5ರಂದು ಭೇಟಿ ಮಾಡುವ ನೆಪದಲ್ಲಿ ಶೇಕ್ ನಾಗೂರ್ ಬೀ ಅವರನ್ನು ವಡ್ಲಮುಡಿ ಹೊರವಲಯಕ್ಕೆ ಕರೆದೊಯ್ದಿದ್ದಾರೆ. ಬಳಿಕ ಆಕೆಗೆ ಸೈನೈಡ್ ಮಿಶ್ರಿತ ಆಲ್ಕೋಹಾಲ್ ಬೆರೆಸಿಕೊಟ್ಟು ಕೊಲೆ ಮಾಡಿದ್ದು, ಆಕೆಯ ಚಿನ್ನಾಭರಣಗಳನ್ನು ಕದ್ದೊಯ್ದು ಪರಾರಿಯಾಗಿದ್ದಾರೆ.

ಶೇಕ್ ನಾಗೂರ್ ಬೀ ಕೊಲೆ ಪ್ರಕರಣ ಬೆನ್ನು ಹತ್ತಿದ ಪೊಲೀಸರಿಗೆ ಅವರು ಮಹೇಶ್ ಎಂಬಾತನ ಆಟೋದಲ್ಲಿ ತೆರಳಿರುವುದು ಪತ್ತೆಯಾಗಿತ್ತು. ಆತನಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಮಹಿಳೆಯರು ಮತ್ತು ಸಂತ್ರಸ್ತೆಯನ್ನು ತನ್ನ ಆಟೋದಲ್ಲಿ ಕರೆದುಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದಲ್ಲದೆ ಆರೋಪಿಗಳು ಮದ್ಯವನ್ನು ಖರೀದಿಸುವುದನ್ನು ನಾನು ನೋಡಿದ್ದೇನೆ ಎಂದು ಹೇಳಿದ್ದಾನೆ.

ಈ ಕುರಿತು ಮಾತನಾಡಿದ ಗುಂಟೂರು ಇನ್ಸ್ಪೆಕ್ಟರ್ ಎ ಶ್ರೀನಿವಾಸ್, ಆರೋಪಿಗಳು ವ್ಯವಸ್ಥಿತವಾಗಿ ದುರ್ಬಲ ಮಹಿಳೆಯರನ್ನು ಗುರಿಯಾಗಿಸಿ ಅವರಲ್ಲಿರುವ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಲು ಪಾನೀಯಗಳಲ್ಲಿ ಮತ್ತು ಆಹಾರಗಳಲ್ಲಿ ಸೈನೈಡ್ ಬೆರೆಸುವ ಮೂಲಕ ಕೃತ್ಯವನ್ನು ನಡೆಸುತ್ತಿದ್ದರು ಎಂದು ಹೇಳಿದ್ದಾರೆ.

ಇವರು ತನ್ನ ಕುಟುಂಬಸ್ಥರನ್ನು ಕೂಡ ಗುರಿ ಮಾಡಿದ್ದು, ಆರೋಪಿಗಳಲ್ಲಿ ಓರ್ವಳಾದ ವೆಂಕಟೇಶ್ವರಿ ತನ್ನ ಅತ್ತೆ ಸುಬ್ಬಲಕ್ಷ್ಮಿಯನ್ನು ಕೊಲೆ ಮಾಡಿದ್ದರು. ಪಿತ್ರಾರ್ಜಿತ ಆಸ್ತಿಯನ್ನು ಲೂಟಿ ಹೊಡೆಯಲು ಈ ಕೃತ್ಯ ನಡೆದಿತ್ತು. ಇದಲ್ಲದೆ ನಾಗಮ್ಮ(65) ಅವರನ್ನು ಕೊಲೆ ಮಾಡಿದ್ದಾರೆ. ಇವರು ಆರೋಪಿ ಮಹಿಳೆಯೋರ್ವರ ನೆರೆ ಮನೆಯವರಾಗಿದ್ದರು. ಆಕೆಗೆ ನೀಡಬೇಕಿದ್ದ 20,000 ಸಾಲದ ಹಣ ವಾಪಸ್ಸು ನೀಡುವುದನ್ನು ತಪ್ಪಿಸಲು ಕಳೆದ ಆಗಸ್ಟ್ ನಲ್ಲಿ ಆಕೆಯನ್ನು ಕೊಲೆ ಮಾಡಲಾಗಿತ್ತು.

ಈ ಕೊಲೆ ಕೃತ್ಯಗಳ ಹೊರತಾಗಿಯೂ ಗುಂಪು ಬೇರೆ ಮೂವರು ಮಹಿಳೆಯರ ಕೊಲೆಗೆ ಪ್ರಯತ್ನಿಸಿದೆ. ಗ್ರಾಮದ ಸ್ವಯಂ ಸೇವಕಿಯಾಗಿ ಕೆಲಸ ಮಾಡುತ್ತಿದ್ದ ಅನ್ನಪೂರ್ಣ ಅವರಿಗೆ ಸೈನೈಡ್ ಮಿಶ್ರಿತ ಆಹಾರ ನೀಡಲಾಗಿತ್ತಾದರೂ ಆಕೆ ಅನುಮಾನಗೊಂಡು ಸೇವಿಸಿರಲಿಲ್ಲ. ಮುರಗಪ್ಪ ವರಲಮಡಿ ಎಂಬವರಿಗೂ ಇದೇ ರೀತಿ ಹತ್ಯೆಗೆ ತಂತ್ರ ರೂಪಿಸಿದ್ದರು ಎನ್ನುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News