ಆಂಧ್ರಪ್ರದೇಶ| ಜಗನ್ ನಂತರ ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಮೇಲೂ ಕಲ್ಲು ತೂರಾಟ

Update: 2024-04-15 07:49 GMT

  ಪವನ್ ಕಲ್ಯಾಣ್ , ಚಂದ್ರಬಾಬು ನಾಯ್ಡು| PC : X 

ಹೈದರಾಬಾದ್: ಎಪ್ರಿಲ್ 13ರಂದು ಕಲ್ಲು ತೂರಾಟದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಗಾಯಗೊಂಡ ನಂತರ, ರವಿವಾರದಂದು ತೆಲುಗು ದೇಶಂ ಮುಖ್ಯಸ್ಥ ಎನ್‍.ಚಂದ್ರಬಾಬು ನಾಯ್ಡು ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಮೇಲೂ ಎರಡು ಪ್ರತ್ಯೇಕ ಘಟನೆಗಳಲ್ಲಿ ಕಲ್ಲು ತೂರಾಟ ನಡೆದಿದೆ. ಕ್ರಮವಾಗಿ ಗುಂಟೂರು ಹಾಗೂ ವಿಶಾಖಪಟ್ಟಣಂನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಈ ಇಬ್ಬರೂ ಕಲ್ಲು ತೂರಾಟದಲ್ಲಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ನಾನು ಇಂತಹ ದಾಳಿಗಳಿಂದ ಬೆದರುವುದಿಲ್ಲ ಎಂದು ಚಂದ್ರಬಾಬು ನಾಯ್ಡು ತಿರುಗೇಟು ನೀಡಿದ್ದಾರೆ. “ಇಲ್ಲಿ ಕಲ್ಲುಗಳನ್ನು ತೂರಲಾಯಿತು. ಜನರು ಅವರನ್ನು ಪಾರಾಗಲು ಬಿಡುವುದಿಲ್ಲ ಹಾಗೂ ಹೊರ ಹಾಕುತ್ತಾರೆ. ಗಾಂಜಾ ಮತ್ತು ಬ್ಲೇಡ್ ಗ್ಯಾಂಗ್ ಗಳು ಇಲ್ಲಿಗೆ ಬಂದಿವೆ. ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ನನಗೆ ತಿಳಿಯುತ್ತಿಲ್ಲ. ವಿಜಯವಾಡದಲ್ಲಿ ನಡೆದ ನಾಟಕವನ್ನೂ ಉದ್ದೇಶಿಸಿ ನಾನು ಹೇಳುತ್ತಿದ್ದೇನೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ರವಿವಾರ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ಪವನ್ ಕಲ್ಯಾಣ್ ಪ್ರಚಾರ ನಡೆಸುತ್ತಿದ್ದಾಗ, ಅವರ ಮೇಲೂ ಕಲ್ಲು ತೂರಾಟ ನಡೆದಿದೆ. ಈ ಕಲ್ಲು ತೂರಾಟವನ್ನು ಕಳಪೆ ತಂತ್ರ ಎಂದು ಟೀಕಿಸಿರುವ ಪವನ್ ಕಲ್ಯಾಣ್, ಜನರು ಕಲ್ಲು ತೂರಾಟ ನಡೆಸಿದವರನ್ನು ಬಯಲು ಮಾಡುವ ಮೂಲಕ ಅವರ ವಿರುದ್ಧ ತಿರುಗಿ ಬೀಳಲಿದ್ದಾರೆ ಹಾಗೂ ಶಿಕ್ಷಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ. “ವಿಜಯವಾಡದಲ್ಲಿ ಜಗನ್ ಮೇಲೆ ಕಲ್ಲು ತೂರಾಟ ನಡೆದಾಗ ಅಲ್ಲಿ ವಿದ್ಯುತ್ ಪೂರೈಕೆ ಇರಲಿಲ್ಲ. ಮುಖ್ಯಮಂತ್ರಿಗಳ ಸಭೆಯಲ್ಲಿ ವಿದ್ಯುತ್ ಕಡಿತವಾದರೆ, ಅದಕ್ಕೆ ಯಾರನ್ನು ಹೊಣೆಗಾರರನ್ನಾಗಿಸಬೇಕು” ಎಂದು ಅವರು ಪ್ರಶ್ನಿಸಿದ್ದಾರೆ.

ವಿಜಯವಾಡದಲ್ಲಿ ಚುನಾವಣಾ ಪ್ರಚಾರ ನಡೆಸುವಾಗ ಯಾರೋ ಒಬ್ಬರು ನಡೆಸಿದ ಕಲ್ಲು ತೂರಾಟದಿಂದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಗಾಯಗೊಂಡ ನಂತರ ಈ ಬೆಳವಣಿಗೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News