ಕೃಷ್ಣಾ ನದಿ ನೀರು ವಿಚಾರ ಆಂಧ್ರ-ತೆಲಂಗಾಣ ನಡುವೆ ಉದ್ವಿಗ್ನತೆ: ನಾಗಾರ್ಜುನಸಾಗರ ಅಣೆಕಟ್ಟು ಪ್ರದೇಶಕ್ಕೆ ಸಿಆರ್‌ಪಿಎಫ್‌ ಭದ್ರತೆ

Update: 2023-12-02 07:07 GMT
Photo: PTI

ಹೈದರಾಬಾದ್:‌ ತೆಲಂಗಾಣ ವಿಧಾನಸಭಾ ಚುನಾವಣೆ ಗುರುವಾರ ಆರಂಭಗೊಳ್ಳಲು ಕೆಲವೇ ಗಂಟೆಗಳ ಮೊದಲು ಮುಂಜಾನೆ 2 ಗಂಟೆ ವೇಳೆಗೆ ಆಂಧ್ರ ಪ್ರದೇಶವು ಅಲ್ಲಿನ ನಾಗಾರ್ಜುನ ಸಾಗರ ಜಲಾಶಯದ ಮೇಲೆ ನಿಯಂತ್ರಣ ಪಡೆದುಕೊಂಡ ಪರಿಣಾಮ ಎರಡೂ ರಾಜ್ಯಗಳ ನಡುವೆ ಉದ್ವಿಗ್ನತೆ ತಲೆದೋರಿದೆ. ಈ ಡ್ಯಾಂ ಪ್ರದೇಶದಲ್ಲಿ ಈಗ ಭದ್ರತೆ ಹೆಚ್ಚಿಸಲಾಗಿದೆ. ತೆಲಂಗಾಣದ ಹೆಚ್ಚಿನ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವಾಗ ಆಂಧ್ರ ಪ್ರದೇಶದ ಸುಮಾರು 700 ಪೊಲೀಸರು ಡ್ಯಾಮ್‌ ಪ್ರದೇಶಕ್ಕೆ ತೆರಳಿ ಪ್ರತಿ ಗಂಟೆಗೆ ಕೃಷ್ಣಾ ನದಿಯ 500 ಕ್ಯೂಸೆಕ್ಸ್‌ ಹೊರಬಿಡುವ ಬಾಗಿಲನ್ನು ತೆರೆದರು.

ಗುರುವಾರ ಬೆಳಿಗ್ಗೆ ಆಂಧ್ರ ಪ್ರದೇಶ ನೀರಾವರಿ ಸಚಿವ ಅಂಬಟಿ ರಾಯುಡು ಅವರು ಟ್ವಿಟರ್‌ನಲ್ಲಿ ಒಂದು ಪೋಸ್ಟ್‌ ಮಾಡಿ “ಕುಡಿಯುವ ನೀರು ಪಡೆಯುವ ಉದ್ದೇಶದಿಂದ ನಾವು ನಾಗಾರ್ಜುನ ಸಾಗರ ಬಲದಂಡೆ ಕಾಲುವೆಯಿಂದ ಕೃಷ್ಣಾ ನದಿಯ ನೀರನ್ನು ಬಿಡುಗಡೆಗೊಳಿಸುತ್ತಿದ್ದೇವೆ,” ಎಂದು ಪೋಸ್ಟ್‌ ಮಾಡಿ ನಂತರ ಆಂಧ್ರ ಮತ್ತು ತೆಲಂಗಾಣ ನಡುವಿನ ಒಪ್ಪಂದದಂತೆ ತಮ್ಮ ರಾಜ್ಯದ ಪಾಲಿನ ನೀರನ್ನು ಮಾತ್ರ ಪಡೆದುಕೊಳ್ಳುತ್ತಿರುವುದಾಗಿ ಸ್ಪಷ್ಟೀಕರಣ ನೀಡಿದರು. “ನಾವು ಯಾವುದೇ ಒಪ್ಪಂದ ಉಲ್ಲಂಘಿಸಿಲ್ಲ. ಕೃಷ್ಣಾ ನದಿಯ ಶೇ 66 ನೀರು ಆಂಧ್ರ ಪ್ರದೇಶಕ್ಕೆ ಮತ್ತು ಶೇ 34 ನೀರು ತೆಲಂಗಾಣಕ್ಕೆ ಸೇರಿದೆ. ನಮಗೆ ಸೇರದ ಒಂದೇ ಒಂದು ಹನಿ ನೀರನ್ನು ಪಡೆದುಕೊಂಡಿಲ್ಲ. ನಮ್ಮ ಪ್ರದೇಶಕ್ಕೆ ನೀರು ಹರಿಸುವ ಕಾಲುವೆಯನ್ನು ತೆರೆದಿದ್ದೇವೆ. ಈ ನೀರು ನಮಗೆ ಸೇರಿದ್ದು,” ಎಂದು ಅವರು ತಿಳಿಸಿದರು.

ಈ ವಿಚಾರ ಇನ್ನಷ್ಟು ಉದ್ವಿಗ್ನಗೊಳ್ಳುತ್ತಿದ್ದಂತೆಯೇ ಕೇಂದ್ರ ಮಧ್ಯಪ್ರವೇಶಿಸಿ ನವೆಂಬರ್‌ 28ರಲ್ಲಿದ್ದಂತೆ ನೀರು ಬಿಡುಗಡೆ ವಿಚಾರ ಇರಬೇಕೆಂದು ಹೇಳಿದೆ. ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಅಧಿಕಾರಿಗಳ ಜೊತೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ನಡೆಸಿದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ನಂತರ ಎರಡೂ ರಾಜ್ಯಗಳು ಒಪ್ಪಿವೆ.

ಇನ್ನಷ್ಟು ಸಂಘರ್ಷ ತಪ್ಪಿಸಲು ಡ್ಯಾಮ್‌ ಪ್ರದೇಶವನ್ನು ಸಿಆರ್‌ಪಿಎಫ್‌ ಸಿಬ್ಬಂದಿ ಕಾವಲು ಕಾಯಲಿದ್ದಾರೆ ಹಾಗೂ ಎರಡೂ ರಾಜ್ಯಗಳಿಗೆ ಒಪ್ಪಂದದಂತೆ ನೀರು ಸಿಗುವಂತೆ ನೋಡಿಕೊಳ್ಳಲಿದ್ದಾರೆ.

ಆಂಧ್ರ ಪೊಲೀಸರು ಡ್ಯಾಂ ಸ್ಥಳಕ್ಕೆ ಬಂದ ವಿಚಾರವನ್ನು ಗುರುವಾರ ಬೆಳಿಗ್ಗೆ ತೆಲಂಗಾಣ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ತಿಳಿಸಿದ್ದರಲ್ಲದೆ ಗೇಟ್‌ ಸಂಖ್ಯೆ 5 ಮತ್ತು 7ರಲ್ಲಿರುವ ಮುಖ್ಯ ರೆಗ್ಯುಲೇಟರ್‌ಗಳನ್ನು ತೆರೆದು ಸುಮಾರು 5000 ಕ್ಯೂಸೆಕ್ಸ್‌ ನೀರು ಆಂಧ್ರ ಪ್ರದೇಶಕ್ಕೆ ಹರಿಸಲಾಗಿದೆ ಸಿಸಿಟಿವಿ ಕ್ಯಾಮೆರಾಗಳಿಗೆ ಹಾನಿಯೆಸಗಲಾಗಿದೆ, ಇದು ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸುವ ಜೊತೆಗೆ ಹೈದರಾಬಾದ್‌ ಮತ್ತು ಸುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆಗೆ ಅಡಚಣೆ ಉಂಟುಮಾಡಲಿದೆ ಎಂದಿದ್ದರು.

ಆಂಧ್ರ ಪೊಲೀಸರ ವಿರುದ್ಧ ನಲಗೊಂಡ ಜಿಲ್ಲೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News